ಬೆಳ್ತಂಗಡಿ: 57 ಬೂತ್ಗಳಲ್ಲಿ ವಿಡಿಯೊ ಚಿತ್ರೀಕರಣ ವ್ಯವಸ್ಥೆ
ಬೆಳ್ತಂಗಡಿ: ಲೋಕಸಭಾ ಚುನಾವಣೆಯ ಅಂತಿಮ ಸಿದ್ಧತೆಗಳು ಬುಧವಾರ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ನಡೆದಿದ್ದು ಮಧ್ಯಾಹ್ನದ ವೇಳೆಗೆ ಮತಯಂತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ ತಂತಮ್ಮ ಮತಗಟ್ಟೆಗಳಿಗೆ ತೆರಳಿದರು.
ತಾಲೂಕಿನ 238 ಮತಗಟ್ಟೆಗಳಿಗೆ 1112 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ. ಅದರಲ್ಲಿ 834 ಮಂದಿ ಮತಗಟ್ಟೆ ಅಧಿಕಾರಿಗಳು. 278 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. 71 ಮಂದಿ ಮೈಕ್ರೋ ಅಬ್ಸರ್ವರ್ಸ್ ಹಾಗೂ 57 ಮಂದಿ ವೆಬ್ಕಾಸ್ಟಿಂಗ್ ಸ್ಟೂಡೆಂಟ್ಸ್ ಸಹಕರಿಸಲಿದ್ದಾರೆ. 57 ಬೂತ್ಗಳಲ್ಲಿ ವೀಡಿಯೊ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. 238 ಮತಗಟ್ಟೆಗಳಲ್ಲಿ 45 ನಕ್ಸಲ್ ಬಾಧಿತ, 25 ಅತಿ ಸೂಕ್ಷ್ಮ, 50 ಸೂಕ್ಷ್ಮ ಮತ್ತು 118 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ 3 ಮಂದಿ ಇನ್ಸ್ಪೆಕ್ಟರ್ಗಳು, 5 ಮಂದಿ ಸಬ್ಇನ್ಸ್ಪೆಕ್ಟರ್ಗಳು, 9 ಮಂದಿ ಎಎಸ್ಐಗಳು, ಬಿಎಸ್ಎಫ್ನ 60 ಮಂದಿ ಯೋಧರು, ಪುಣೆಯ ಎಸ್ಆರ್ಪಿಎಫ್ನ 25 ಮಂದಿ, ಕೇರಳ ಸ್ಪೆಷಲ್ ಆರ್ಮಿಡ್ ಫೋರ್ಸ್ನ 89 ಮಂದಿ, ಬೆಂಗಳೂರು ಸಿಟಿ ಆರ್ಮಿ ಪಡೆಯ 32 ಮಂದಿ, ಕೆಎಸ್ಆರ್ಪಿಯ 3 ಬೆಟಾಲಿಯನ್, 150 ಮಂದಿ ಸಿವಿಲ್ ಪೊಲೀಸರು, 71 ಮಂದಿ ಹೋಮ್ಗಾರ್ಡ್ಗಳು ಕಾರ್ಯ ನಿರ್ವಹಿಸಲಿದ್ದಾರೆ. ಮತದಾನ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನೂ ಮಾಡಲಾಗಿದೆ.