ಬೆಳ್ತಂಗಡಿ: ನಕ್ಸಲ್ಬಾಧಿತ ಮತಗಟ್ಟೆಗಳಲ್ಲಿ ಯೋಧರು
ಸುಬ್ರಹ್ಮಣ್ಯ: ಲೋಕಸಭೆಗೆ ಇಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗೆ ಬಂದು ನಿರಾತಂಕವಾಗಿ ಮತದಾನ ಮಾಡಿ ತೆರಳಲು ಮತ್ತು ಶಾಂತಿಯುತ ಮತದಾನಕ್ಕಾಗಿ ನಕ್ಸಲ್ ಬಾಧಿತ ಭಾಗಗಳ ಸೂಕ್ಷ್ಮ ಮತಗಟ್ಟೆ ಮತ್ತು ಸಾಮಾನ್ಯ ಮತಗಟ್ಟೆಗಳಲ್ಲಿ ವಿಶೇಷ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಿ ಕಟ್ಟೆಚ್ಚರ ವಹಿಸಲಾಗಿದೆ. ಈ ಮತಗಟ್ಟೆಗಳನ್ನು ಕೇಂದ್ರಿಯ ಅರೆ ಸೈನಿಕ ಪಡೆ ಯೋಧರೂ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.
5 ಮತಗಟ್ಟೆ ನಕ್ಸಲ್ ಪೀಡಿತ: ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಒಟ್ಟು 42 ಮತಗಟ್ಟೆಗಳಲ್ಲಿ ಪೈಕಿ 5ಮತಗಟ್ಟೆಗಳು ನಕ್ಸಲ್ ಪೀಡಿತ ಮತಗಟ್ಟೆಗಳು. ಅವುಗಳಲ್ಲಿ, ಕುಲ್ಕುಂದ ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರುವಿನ 2 ಬೂತ್ಗಳು ನಕ್ಸಲ್ ವ್ಯಾಪ್ತಿ ಮತಗಟ್ಟೆ ಆಗಿದ್ದು ಅತೀಸೂಕ್ಷ್ಮ ಮತಗಟ್ಟೆ ನೆಲೆಯಲ್ಲಿ ಇಲ್ಲಿಗೆ ವಿಶೇಷ ಭದ್ರತೆ ನೀಡಲಾಗಿದೆ. ಈ ಮತಗಟ್ಟೆಗಳಿಗೆ ಕೇಂದ್ರ ಅರೆ ಸೈನಿಕ ಪಡೆಯ ಯೋಧರನ್ನು ನಿಯೋಜಿಸಿ ಭದ್ರತೆ ವಹಿಸಲಾಗಿದೆ. ಉಳಿದಂತೆ ಇತರ ಸಾಮಾನ್ಯ ಮತಗಟ್ಟೆಗಳಿಗೂ ಭದ್ರತೆ ಕಲ್ಪಿಸಲಾಗಿದೆ.
ಹಲವೆಡೆ ಕೂಂಬಿಂಗ್: ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಈ ಹಿಂದೆ ನಕ್ಸಲರು ಕಂಡು ಬಂದ ನಕ್ಸಲ್ ಬಾಧಿತ ಸ್ಥಳಗಳಾದ, ಚೇರು, ಪಲ್ಲಿಗದ್ದೆ, ಕುಲ್ಕುಂದ, ನಡುತೋಟ, ಕೈಕಂಬ, ಉಪ್ಪುಕಳ, ಬಾಳುಗೋಡು, ಕಲ್ಮಕಾರು, ಹರಿಹರ ಮುಂತಾದೆಡೆ ಮತಗಟ್ಟೆ ವ್ಯಾಪ್ತಿಯಲ್ಲಿ ಈಗಾಗಲೇ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ನಡೆಸಿದೆ. ಜೊತೆಗೆ ಗುಂಡ್ಯದಿಂದ ಕಲ್ಮಕಾರುವರೆಗೆ ಇರುವ ಮತಗಟ್ಟೆಗಳ ವ್ಯಾಪ್ತಿಯುದ್ದಕ್ಕೂ ಕೇಂದ್ರಿಯ ಅರೆ ಸೈನಿಕರ 25 ಮಂದಿಯಿರುವ ಸೈನಿಕರ ಪಡೆಗಳು, ನಕ್ಸಲ್ ನಿಗ್ರಹ ಪಡೆಗಳು ಜಂಟಿಯಾಗಿ ಇದೀಗ ಗಸ್ತು ಕಾರ್ಯಚರಣೆಯಲ್ಲಿ ನಿರತವಾಗಿ ಬಿಗು ಬಂದೋಬಸ್ತ್ನಲ್ಲಿ ತೊಡಗಿವೆ. ಅಲ್ಲದೆ ರಾತ್ರಿ ಸಂಚರಿಸುತ್ತಿರುವ ವಾಹನಗಳ ತಪಾಸಣೆ ನಡೆಸಲಾಗಿದೆ.
ಮತದಾರರಲ್ಲಿ ಜಾಗೃತಿ:ನಕ್ಸಲ್ ಬಾಧಿತ ಜಾಗಗಳಲ್ಲಿ ಕೇಂದ್ರ ಅರೆ ಸೈನಿಕ ಪಡೆಯ ಯೋಧರು ಸ್ಥಳೀಯ ಪೋಲಿಸರ ನೆರವು ಪಡೆದು ಈಗಾಗಲೇ ಅಲ್ಲಲ್ಲಿ ಪಥಸಂಚಲನ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಧೈರ್ಯ ತುಂಬಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುವುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ.