ಬೆಳ್ಳಾರೆ: ಅಡಕೆ ಮರ ಏರುವ ಉಪಕರಣ ಪ್ರಾತ್ಯಕ್ಷಿಕೆ
ಸುಳ್ಯ: ಇಂದಿನ ದಿನದಲ್ಲಿ ಕೃಷಿ ಸೊರಗುತ್ತಿದೆ ಎಂಬ ಮಾತಿದೆ. ಆದರೆ ಕೃಷಿ ಸೊರಗುತ್ತಿಲ್ಲ. ಬದಲಾಗಿ ಪ್ರಯೋಗಶೀಲ ಬದುಕು ಕಡಿಮೆಯಾಗುತ್ತಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ಜಿ.ಸತ್ಯನಾರಾಯಣ ಹೇಳಿದರು.
ಅವರು ಮಂಗಳವಾರ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ಎಗ್ರಿಕಲ್ಚರಿಸ್ಟ್ ಗುಂಪು ಹಾಗೂ ಬೆಳ್ಳಾರೆ ಕೃಷಿಕರ ವೇದಿಕೆ ಮತ್ತು ಅಡಕೆ ಪತ್ರಿಕೆ ಸಹಯೋಗದಲ್ಲಿ ನಡೆದ ಅಡಕೆ ಮರ ಏರುವ ಉಪಕರಣದ ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಕರಿಗೆ ಉಪಯೋಗವಾಗುವ ಅನೇಕ ಉಪಕರಣಗಳು ಇಂದು ಅಗತ್ಯವಿದೆ. ಇದರ ಅನ್ವೇಷಣೆ ಆಗಬೇಕಾಗಿದೆ. ಅದಕ್ಕೆ ಪ್ರೋತ್ಸಾಹ ಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು
ಅಡಕೆ ಮರ ಏರುವ ಉಪಕರಣವನ್ನು ಅಭಿವೃದ್ಧಿಪಡಿಸಿದ ತೀರ್ಥಹಳ್ಳಿಯ ಮಲ್ಲೇಸರ ಕಿರಣ್, ಕೃಷಿಕನಾಗಿಯೇ ಕಾರ್ಮಿಕರ ಸಮಸ್ಯೆ ಮನಗಂಡು ಈ ಉಪಕರಣ ಅಭಿವೃದ್ಧಿಪಡಿಸಲು ಸಹಕಾರಿಯಾಯಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಡಕೆ ಮರ ಏರುವ ಉಪಕರಣವನ್ನು ಅಭಿವೃದ್ಧಿಪಡಿಸಿದ ಕಿರಣ್ ಅವರನ್ನು ಗೌರವಿಸಲಾಯಿತು. ಬೆಳ್ಳಾರೆ ಕೃಷಿಕರ ವೇದಿಕೆಯ ಎಂ.ವಿ. ಭಟ್, ಬೆಳ್ಳಾರೆ ಕೃಷಿಕರ ವೇದಿಕೆ ಮೂಲಕ ವಿವಿಧ ನೂತನ ಕೃಷಿ ವಸ್ತುಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ, ರಮೇಶ್ ದೇಲಂಪಾಡಿ ಪ್ರಸ್ತಾವನೆಗೈದರು. ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.
ಅಡಕೆ ತೋಟಕ್ಕೆ ಔಷಧಿ ಸಿಂಪಡಿಸುವ ಸ್ಪ್ರೇಗನ್ ಪ್ರಾತ್ಯಕ್ಷಿಕೆ ನಡೆಯಿತು. ಪ್ರಾತ್ಯಕ್ಷಿಕೆಯ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.