ಸುಳ್ಯದಲ್ಲಿ ಟೂರಿಸ್ಟ್ ಚಾಲಕರಿಗೆ ಮತದಾನ ಹಕ್ಕು
ಸುಳ್ಯ: ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತಗೊಂಡಿರುವ ನೂರಾರು ಟೂರಿಸ್ಟ್ ವಾಹನ ಚಾಲಕರಿಗೆ ಮತದಾನದ ವ್ಯವಸ್ಥೆಗೆ ಅಸಡ್ಡೆ ಮಾಡಿದ ಕುರಿತು ಟೂರಿಸ್ಟ್ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ನಾಯಕರು ಮಧ್ಯೆ ಪ್ರವೇಶಿಸಿ ಮತದಾನ ಕುರಿತಂತೆ ಚುನಾವಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ವ್ಯವಸ್ಥೆಗೊಳಿಸಿದರು.
ಆದಾಗ್ಯೂ ಸುಳ್ಯ ವಿಧಾನಸಭಾಕ್ಷೇತ್ರದ ಮತದಾರಲ್ಲದವರಿಗೆ ಮತದಾನ ವ್ಯವಸ್ಥೆ ಸಾಧ್ಯವಾಗದೇ ಇದ್ದು ಈ ಕುರಿತು ಅಸಡ್ಡೆ ವಹಿಸಿದ ಅಧಿಕಾರಿಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಪ್ರತಿ ಬಾರಿಯಂತೆ ಈ ಸಲವೂ ನೂರಾರು ಟೂರಿಸ್ಟ್ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಸಾರಿಗೆ ಇಲಾಖೆ ನಿಯೋಜಿಸಿದ್ದು ಈ ವಾಹನಗಳ ಚಾಲಕರಿಗೆ ನಿಮಗೆ ನಿಯೋಜಿತ ಸ್ಥಳದಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಡುವುದಾಗಿ ಬಾಯ್ದೆರೆಯಾಗಿ ಆಶ್ವಾಸನೆ ನೀಡಿದ್ದರು. ಆದರೆ ಬುಧವಾರ ಬೆಳಗ್ಗೆ ಕರ್ತವ್ಯಕ್ಕಾಗಿ ಸುಳ್ಯಕ್ಕೆ ಆಗಮಿಸಿದ ನೂರಾರು ಟೂರಿಸ್ಟ್ ವಾಹನ ಚಾಲಕರಿಗೆ ಮತದಾನದ ವ್ಯವಸ್ಥೆಯ ಯಾವುದೇ ಸೂಚನೆಗಳು ಇಲ್ಲದಿರುವುದನ್ನು ಕಂಡು ಒಂದು ಹಂತದಲ್ಲಿ ಪ್ರತಿಭಟನೆಗೂ ಮುಂದಾಗಿದ್ದರು.
ಈ ಹಂತದಲ್ಲಿ ಬಿಜೆಪಿ ನಾಯಕರಾದ ಉಮೇಶ್ ವಾಗ್ಲೆ, ಕೃಪಾಶಂಕರ ತುದಿಯಡ್ಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದಾಗ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಮಧಾಹ್ನದವರೆಗೂ ಮತದಾನದ ಅವಕಾಶ ಸಿಗುವ ಸೂಚನೆ ಲಭಿಸದಿದ್ದಾಗ ಬಿಜೆಪಿ ಮಾಧ್ಯಮ ವಕ್ತಾರ ವಿನಯ ಕುಮಾರ್ ಕುಂದಡ್ಕ ಸಹಾಯಕ ಚುನಾವಣಾಧಿಕಾರಿಗಳಿಗೆ ವಾಸ್ತವತೆ ವಿವರಿಸಿದಾಗ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಚಾಲಕರಿಗೆ ಕರ್ತವ್ಯನಿರತ ಸ್ಥಳದಲ್ಲಿಯೇ ಮತದಾನದ ವ್ಯವಸ್ಥೆ ಮಾಡುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆದರೂ ಬೇರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಾಲಕರಿಗೆ ಮತದಾನದ ಅವಕಾಶ ಲಭಿಸುವ ಕುರಿತು ಅನಿಶ್ಚಿತತೆಯಿದ್ದು, ಚಾಲಕರ ಮತ ಚಲಾಯಿಸುವ ಹಕ್ಕನ್ನು ಜಾರಿಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಸೂಕ್ತಕ್ರಮ ಕೈಗೊಂಡು ಎಲ್ಲಾ ಕರ್ತವ್ಯನಿರತ ಚಾಲಕರಿಗೂ ಮತದಾನದ ಹಕ್ಕನ್ನು ವ್ಯವಸ್ಥೆ ಮಾಡಬೇಕಾಗಿ ಸುಳ್ಯ ಬಿಜೆಪಿ ಆಗ್ರಹಿಸಿದೆ.