ಇದು ಮದುವೆ ಮನೆಯಲ್ಲ; ಮತಗಟ್ಟೆ!
ಮಂಗಳೂರು: ಪಕ್ಕನೆ ನೋಡಿದರೆ ಅದು ದಿಬ್ಬಣಿಗರನ್ನು ಸ್ವಾಗತಿಸುವ ಮದುವೆ ಮನೆಯಂತಿದೆ. ಆದರೆ ಇದು ಮತದಾರನಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಕೋರುವ ಮತದಾನ ಕೇಂದ್ರ.ಮೂಡುಬಿದರೆ ಪುರಸಭೆಯಲ್ಲಿನ 59ನೇ ಮತಗಟ್ಟೆ ವೈಶಿಷ್ಟ್ಯ. ಜಿಲ್ಲೆಯ 29 ಮಾದರಿ ಮತಗಟ್ಟೆಯಲ್ಲಿ ಮೂಡುಬಿದರೆಯದ್ದು ಮತ್ತಷ್ಟು ವಿಶೇಷ.
ದ್ವಾರದಲ್ಲಿಯೇ ಸ್ವಾಗತಿಸುತ್ತವೆ 'ಮಾದರಿ ಮತಗಟ್ಟೆಗೆ ಬರುವ ಮತದಾರನಿಗೆ ಸ್ವಾಗತ' ಪ್ಲೆಕ್ಸ್. ತಳಿರು ತೋರಣಗಳ ಸ್ವಾಗತ. ಒಳಗೆ ಬಂದರೆ ರೆಡ್ ಕಾರ್ಪೆಟ್, ಕುಳಿತುಕೊಳ್ಳಲು ಕುರ್ಚಿ, ಬಿಸಿಲ ಧಗೆ ತಾಕದಂತೆ ಶಾಮಿಯಾನ, ಬಾಯಾರಿಕೆ ನಿವಾರಣೆಗೆ ಕುಡಿಯುವ ನೀರು.. ಮತದಾನ ಮಾಹಿತಿ ಬೇಕಿದ್ದರೆ ಹೆಲ್ಪ್ ಡೆಸ್ಕ್. ಅನಾರೋಗ್ಯ ಕಾಡಿದರೆ ಪಕ್ಕದಲ್ಲಿಯೇ ಆಸ್ಪತ್ರೆ ವ್ಯವಸ್ಥೆ. ಪ್ರಥಮ ಚಿಕಿತ್ಸೆ ವಿಭಾಗ. ಈ ಮತಗಟ್ಟೆಯಲ್ಲಿ 50 ಮಂದಿ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಕೂಡಾ ಮಾಡಿದ್ದರು. ಇಲ್ಲಿ 1,341 ಮತದಾರರು ಇದ್ದಾರೆ. ಬಿಸಿಲಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದವರಿಗೆ ಈ ಬಾರಿ ಮಾತ್ರ ಅಚ್ಚರಿ ಖುಷಿ ತಂದಿತು. ಮದುವೆ ಮನೆಗೆ ಬರುತ್ತಿದ್ದೇವೆಯೋ ಎಂಬ ಭಾವನೆ ಬಂದದ್ದು ಸುಳ್ಳಲ್ಲ. ಈ ವ್ಯವಸ್ಥೆ ಹಿಂದೆ ಚುನಾವಣೆ ಆಯೋಗದ ನಿರ್ದೇಶನ ಇದೆ.