ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತದಾನ ದಾಖಲೆ ಬರೆದ ಸುಳ್ಯ

Lingaraj Badiger
Updated On : 19 Apr 2014, 11:49 am

ಸುಳ್ಯ: ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣದಲ್ಲಿ ದಾಖಲೆ ಬರೆದಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ 1,86,015 ಮತದಾರರ ಪೈಕಿ 1,57,025 ಮತದಾರರು ಇಲ್ಲಿ ಮತ ಚಲಾಯಿಸಿ ಶೇ.84.42 ಮತದಾನವಾಗಿದೆ. ಇದು ದ.ಕ. ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಮಾತ್ರವಲ್ಲದೆ ರಾಜ್ಯದಲ್ಲಿಯೇ ಅತ್ಯಧಿಕ ಮತದಾನ ಆದ ಕ್ಷೇತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ವಿದೇಶದಿಂದ ಹಿಂದುರುಗಿದರು: ಇದುವರೆಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲು- ಗೆಲುವಿನ ಅಂತರದಲ್ಲಿ ದಾಖಲೆ ಬರೆಯುತ್ತಿದ್ದ ಸುಳ್ಯ, ಈ ಬಾರಿ ಮತದಾನದ ಪ್ರಮಾಣದಲ್ಲೂ ದಾಖಲೆ ಬರೆದದ್ದು ವಿಶೇಷವೆನಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದ ಹಲವು ಯುವಕರು ಮತದಾನಕ್ಕೆಂದೇ ಸುಳ್ಯಕ್ಕೆ ಬಂದು ಮತ ಚಲಾಯಿಸಿರುವುದು ಗಮನೀಯ.
  ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ 80.02 ಮತದಾನವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.80.63 ಮತದಾನವಾಗಿತ್ತು. ಆದರೆ ಈ ಭಾರಿಯ ಪ್ರಮಾಣ ಎಲ್ಲವನ್ನೂ ಮೀರಿ ದಾಖಲೆ ಬರೆದಿದೆ.
ಮಡಪ್ಪಾಡಿಯಲ್ಲಿ ಗರಿಷ್ಠ ಮತದಾನ: ಮಡಪ್ಪಾಡಿ ಹಿ.ಪ್ರಾ. ಶಾಲೆಯ ಉತ್ತರ ಭಾಗದ ಮತದಾನ ಕೇಂದ್ರದಲ್ಲಿ ಗರಿಷ್ಠ ಮತದಾನವಾಗಿದ್ದು, ಇಲ್ಲಿ ಶೇ.95.03 ಮಂದಿ ಮತ ಚಲಾಯಿಸಿದ್ದಾರೆ. ಇಲ್ಲಿನ 624 ಮತದಾರರ ಪೈಕಿ 593 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
 ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನವಾದದ್ದು ಕೊಯಿಲ ಹಿ.ಪ್ರಾ. ಶಾಲೆಯ ದಕ್ಷಿಣ ಭಾಗದ ಮತಕೇಂದ್ರದಲ್ಲಿ. ಇಲ್ಲಿನ 703 ಮತದಾರರ ಪೈಕಿ 503 ಮಂದಿ ಮತ ಚಲಾಯಿಸಿ ಶೇ.71.55 ಮತದಾನವಾಗಿದೆ. ಸುಳ್ಯ ಕ್ಷೇತ್ರದ ಸುಮಾರು 15ಕ್ಕೂ ಅಧಿಕ ಮತಕೇಂದ್ರದಲ್ಲಿ ಶೇ.90ಕ್ಕಿಂತ ಅಧಿಕ ಮತದಾನವಾಗಿದೆ.


ಮತ ನೀಡಿದ ಕೆಲವೇ ಗಂಟೆಗಳಲ್ಲಿ ಮೃತರಾದರು
ಸುಳ್ಯ: ವಯೋವೃದ್ಧರೊಬ್ಬರು ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟ ಘಟನೆ ಬೆಳ್ಳಾರೆ ಸಮೀಪದ ಇಂದ್ರಾಜೆಯಲ್ಲಿ ಸಂಭವಿಸಿದೆ. ಇಂದ್ರಾಜೆಯ ಅಂದು ಬ್ಯಾರಿ(76) ಎಂಬವರು ಮ.12 ಗಂಟೆಗೆ ಯಾರ ಸಹಾಯವೂ ಇಲ್ಲದೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ತೆರಳಿದ್ದರು. ಸಂಜೆ 4 ಗಂಟೆಯ ವೇಳೆಗೆ ಅವರು ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಕೊಡಿಯಾಲದಲ್ಲಿ ಮಾತಿನ ಚಕಮಕಿ
ಸುಳ್ಯ: ಕೊಡಿಯಾಲದ ಮತಗಟ್ಟೆಯಲ್ಲಿ ಅಂಧ ಮತದಾರರೊಬ್ಬರಿಗೆ ಬಿಜೆಪಿ ಕಾರ್ಯಕರ್ತ ಮತ ನೀಡಲು ಸಹಕರಿಸಿದರೆಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ಅವರೊಳಗೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.
ಚುನಾವಣಾ ಪ್ರಚಾರ ನಡೆಸುತ್ತಿದ್ದ ಪಾನಮತ್ತ ವ್ಯಕ್ತಿಯೊಬ್ಬ ಆಲೆಟ್ಟಿಯಲ್ಲಿ ಅಂಗಡಿ ಇರಿಸಿಕೊಂಡಿರುವ ರಾಮಕೃಷ್ಣ ಎಂಬವರಿಗೆ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಹಾಗೂ ಅವರ ಪತ್ನಿಗೆ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ ಕುರಿತು ದೂರು ನೀಡಲಾಗಿದೆ. ಮತದಾನದ ದಿನ ಮರ್ಕಂಜ, ನಾರ್ಣಕಜೆ ಮತ್ತಿತರ ಕಡೆಗಳಿಗೆ ಕಾಂಗ್ರೆಸ್ ನಾಯಕರಿದ್ದ ವಾಹನ ತೆರಳುತ್ತಿದ್ದಾಗ ಅದರಲ್ಲಿ ಬೇರೆ ಊರುಗಳ ಕಾರ್ಯಕರ್ತರಿದ್ದಾರೆಂದು ಬಿಜೆಪಿ ನಾಯಕರು ವಾಹನ ತಡೆಹಿಡಿದಾಗ ಚಕಮಕಿ  ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement