ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನೆಯಲ್ಲಿ ನಿರಾಳ, ಮನದಲ್ಲಿ ತಳಮಳ!

Lingaraj Badiger
Updated On : 19 Apr 2014, 11:48 am

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ನಿತ್ಯ ವಿಧಿ ಪೂರೈಸಿದ ಬಳಿಕ ಮದುವೆ, ಉಪನಯನ ಮೊದಲಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದ ಪೂಜಾರಿ ಬಿಡುವಿಲ್ಲದ ಚುನಾವಣೆ ಪ್ರಚಾರದ ಬಳಿಕವೂ ವಿಶ್ರಾಂತಿ ಪಡೆಯದೆ ಫುಲ್ ಬ್ಯುಸಿಯಾಗಿದ್ದರು.  ಬೆಳಗ್ಗೆ 7 ಗಂಟೆಗೆ ಎದ್ದು ಎಂದಿನಂತೆಯೇ ನಿತ್ಯ ವಿಧಿಗಳನ್ನು ಪೂರೈಸಿ ತಿಂಡಿ ತಿಂದು ಎಲ್ಲ ಪತ್ರಿಕೆಗಳನ್ನು ಪೂರ್ತಿಯಾಗಿ ಓದಿದರು. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಪತ್ರಿಕೆಗಳನ್ನು ಓದಲು ಆಗುತ್ತಿರಲಿಲ್ಲ. ಹೀಗಾಗಿ ಓದದೆ ಉಳಿದ ಪತ್ರಿಕೆ ಕಾರ್‌ನಲ್ಲಿ ಹಾಕಿ ಸಮಯ ಸಿಕ್ಕಿದಾಗ ಓದುತ್ತಿದ್ದರು. ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಪತ್ರಿಕೆಗಳನ್ನು ಓದಿದರು. ಬಳಿಕ ಬಂಟ್ವಾಳದ ಮನೆಯಿಂದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಬಂದು ಮದುವೆಯಲ್ಲಿ ಪಾಲ್ಗೊಂಡರು. ಬಳಿಕ ಉಪನಯನ ಸಮಾರಂಭಕ್ಕೂ ಭೇಟಿ ನೀಡಿದರು. ಈ ಬಾರಿ ಗೌಡ ಸಾರಸ್ವತ ಬ್ರಾಹ್ಮಣರು ಕೂಡಾ ಸಕಾರಾತ್ಮಕವಾಗಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಪರವಾಗಿ ಮತ ಚಲಾಯಿಸಿದ್ದಾರೆ ಎಂದರು.
ನಳಿನ್ ಕುಮಾರ್ ದಿನಚರಿ..
ಬೆಳಗ್ಗೆ ಜಿಲ್ಲಾ ಬಿಜೆಪಿ ಚುನಾವಣೆ ಕಾರ್ಯಾಲಯಕ್ಕೆ ಭೇಟಿ. ಕಾರ್ಯಕರ್ತರು, ಪದಾಧಿಕಾರಿಗಳ ಜತೆ ಮಾತುಕತೆ. ನಂತರ ಬೆಳ್ತಂಗಡಿಯಲ್ಲಿ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಸುಧೀರ್ ವಿವಾಹಕ್ಕೆ ಹಾಜರಿ. ಆ ಬಳಿಕ ಮಂಗಳೂರಿನಲ್ಲಿ ಬಂಧುವೊಬ್ಬರ ಉತ್ತರಕ್ರಿಯೆಗೆ ತೆರಳಿದರು. ಗುರುಪುರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಮೂಡುಶೆಡ್ಡೆ ಮನೆಗೆ ಸಂಜೆ ತೆರಳಿ ಸಾಂತ್ವನ. ಕಟೀಲು ಮತ್ತು ಮೂಡುಬಿದಿರೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗಿ. ದಿನವಿಡೀ ಬಿಡುವಿಲ್ಲದ ಚಟುವಟಿಕೆಯಿಂದ ಓಡಾಟ ನಡೆಸುತ್ತಿದ್ದರು.

ಆಪ್ ಹೋರಾಟ ಆರಂಭ!

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ಆರ್.ವಾಸುದೇವ ಬೆಳಗ್ಗೆ 5.15ಕ್ಕೆ ಎದ್ದು ಸ್ನಾನ ಸಂಧ್ಯಾವಂದನೆ, ಪೂಜೆ ಮುಗಿಸಿ ಬೆಳಗ್ಗೆ 7.30ಕ್ಕೆ ಚುನಾವಣೆ ಆಯೋಗದ ಸೂಚನೆಯಂತೆ ಮತಯಂತ್ರ ಪರಿಶೀಲನೆಗೆ ಆಗಮಿಸಿದ್ದರು. ಆದರೆ ಯಾವ ಅಭ್ಯರ್ಥಿಗಳು ಬಂದಿರಲಿಲ್ಲ. ಹೀಗಾಗಿ ವಾಪಸ್ ಮನೆಗೆ ಹಿಂದಿರುಗಿದರು. ಬಳಿಕ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ನೇತ್ರಾವತಿ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಹೆಚ್ಚಿನ ದರ ವಿಧಿಸಿದ್ದನ್ನು ಹಿಂದೆಗೆಯುವ ಆದೇಶ ಜಾರಿಯಲ್ಲಿದೆಯೇ ಎಂದು ಪ್ರಶ್ನಿಸಿದರು. ಟೋಲ್‌ಗೇಟ್ ದರ ಹೆಚ್ಚು ಮಾಡುವಂತಿಲ್ಲ ಎಂಬ ಆದೇಶ ಊರ್ಜಿತದಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 25 ಮಂದಿ ಆಪ್ ಕಾರ್ಯಕರ್ತರ ಜತೆ ಟೋಲ್‌ಗೇಟ್‌ಗೆ ತೆರಳಿ ಪ್ರತಿಭಟನೆ ನಡೆಸಿದರು. ದರ ಹೆಚ್ಚಳ ಮಾಡುವುದಿಲ್ಲ ಎಂಬ ಭರವಸೆ ಸಿಕ್ಕಿದ ಬಳಿಕ ಮನೆಗೆ ವಾಪಸ್.  ಅಲ್ಲಿಂದ ಸಂಜೆ 4 ಗಂಟೆಗೆ ಬಲ್ಮಠ ಸೋಜಾ ಆರ್ಕೆಡ್‌ನಲ್ಲಿ ಸುದ್ದಿಗೋಷ್ಠಿ. ಟೋಲ್‌ಗೇಟ್ ದರ ಪ್ರತಿಭಟನೆ ಮತ್ತು ದರ ಇಳಿಕೆ ಕುರಿತ ಮಾಹಿತಿ ನೀಡಿಕೆ. ಆಪ್‌ನ ಮುಂದಿನ ಹೋರಾಟ ರೂಪು ರೇಷೆಗಳ ಬಗ್ಗೆ ಕಾರ್ಯಕರ್ತರ ಚರ್ಚೆ. ಶೀಘ್ರ ಹೋರಾಟ  ನಿರ್ಣಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement