ಕಟೀಲು ಜಾತ್ರೆ: ನಾಳೆಯಿಂದ ವಾಹನ ಸಂಚಾರ ವ್ಯತ್ಯಯ
ಮಂಗಳೂರು: ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸಲುವಾಗಿ ಏ.21ರಂದು ಸಂಜೆ 4ರಿಂದ 22ರ ಬೆಳಗ್ಗೆ 6ರ ವರೆಗೆ ಮತ್ತು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ದೇವಸ್ಥಾನದ ರಥಬೀದಿಯಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧಿಸಲಾಗಿದೆ.
ಏ.21ರಂದು ಸಂಜೆ 4ರಿಂದ ಮರುದಿನ ಬೆಳಗ್ಗೆ 6ರ ವರೆಗೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಟು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಮಂಗಳೂರು ಬಜ್ಪೆಯಿಂದ ಕಟೀಲಿಗೆ ಹೋಗುವ ಎಲ್ಲ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‌ನಿಂದ ಏಕಮುಖವಾಗಿ ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಮುಖ್ಯ ರಸ್ತೆ ಸೇರುವುದು.
ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ದೇವಸ್ಥಾನದ ಪಿಯು ಕಾಲೇಜು ಮೈದಾನದಿಂದ ವಿಜಯಾ ಬ್ಯಾಂಕ್ ಎದುರು ರಸ್ತೆಯಲ್ಲಿ ಚಲಿಸಿ ಬಜ್ಪೆ-ಮಂಗಳೂರು ಕಡೆಗೆ, ಕಾರು ಹಾಗೂ ಇತರೆ ವಾಹನಗಳಿಗೆ ಪಿಯು ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‌ಗಳು ಎಂದಿನಂತೆ ನಿಲ್ದಾಣಕ್ಕೆ ಬಂದು ಹೋಗುವುದು. ದೇವಸ್ಥಾನದ ಹಿರಿಯ ಪ್ರಾಥಮಿಕ ಶಾಲೆ ಮೈದಾನದಿಂದ ವಿಜಯಾ ಬ್ಯಾಂಕ್ ವರೆಗೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.