ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಾಸ್ತು ಧರ್ಮಕ್ಕೆ ಸೀಮಿತ ಅಲ್ಲ: ಚಾರುಕೀರ್ತಿಶ್ರೀ

Mainashree
Updated On : 21 Apr 2014, 10:30 am

ಮಂಗಳೂರು: ವಾಸ್ತು ಯಾವುದೇ ಮತ ಧರ್ಮಕ್ಕೆ ಸೀಮಿತವಲ್ಲ, ಮೂಢನಂಬಿಕೆಯೂ ಅಲ್ಲ, ವಾಸ್ತುವಿಗೆ ಅದರಲ್ಲೇ ಆದ ವೈಜ್ಞಾನಿಕ ಕಾರಣವಿದೆ ಎಂದು ಮೂಡುಬಿದಿರೆ ಜೈನ ಮಠದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.
ಅವರು ಭಾನುವಾರ ನಗರದಲ್ಲಿ ಶೈಲೇಶ್ ಜೈನ್ ಹೊರತಂದ 'ಜಾಗತಿಕ ವಾಸ್ತು ವಿಜ್ಞಾನ' ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಆವರಣ ಶುರುವಾದಾಗ ವಾಸ್ತು ಪ್ರಾರಂಭವಾಗುತ್ತದೆ. ಭಾರತಕ್ಕೆ ಉತ್ತರದಲ್ಲಿರುವ ಹಿಮಾಲಯ ವಾಸ್ತು. ಹಾಗಾಗಿ ಹಿಂಸಾಕೃತ್ಯಗಳು ಸಂಭವಿಸುತ್ತಿರುತ್ತವೆ. ಕೇರಳದಿಂದ ಗೋವಾವರೆಗೆ ನೈಋತ್ಯ ಭಾಗ ಎದ್ದು ಕಾಣುವಂತೆ ಇದೆ ಎಂದು ಹೇಳಿದರು.
ಹಾಗಾಗಿಯೇ ಕರಾವಳಿಗರ ಸಾಧನೆ ಎಲ್ಲೆಡೆ ಹಬ್ಬುತ್ತಿದೆ. ಇಲ್ಲಿ ಸಮುದ್ರ ನೀರು ಇರುವುದರಿಂದ ಎಷ್ಟು ಸಾಧಿಸಿದರೂ ಸಾಲದು. ಹಿಂದೆ ಬ್ರಿಟಿಷರು 20 ಅಡಿ ಎತ್ತರದಲ್ಲಿ ಬಂಗಲೆ ನಿರ್ಮಿಸುತ್ತಿದ್ದರು. ಈಗ ಅಂಥ ಕಟ್ಟಡಗಳು ಕಾಂಕ್ರಿಟಿಕರಣವಾಗಿವೆ. ಮೂಡುಬಿದಿರೆಯಲ್ಲಿ ಜೈನ ಬಸದಿ ಮೂರು ಪದರ ಉಪ್ಪರಿಗೆ ಹೊಂದಿದೆ. ವಾಸ್ತು ಪ್ರಕಾರ ಕಟ್ಟಡಗಳಿಗೆ ಗಾಳಿ, ಬೆಳಕು ಸಾಕಷ್ಟು ಇರಬೇಕು. ವಾಸ್ತು ವಾಣಿಜ್ಯೀಕರಣವಾಗಬಾರದು, ವಾಸ್ತು ಹೆಸರಲ್ಲಿ ಇನ್ನೊಬ್ಬರಿಗೆ ಮೋಸ ಆಗಬಾರದು. ಜನರಿಗೆ ವಾಸ್ತವ ಹೇಳಿ, ಸರಳ ವಾಸ್ತು ಇರಲಿ ಎಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳದಲ್ಲಿ ವಾಸ್ತು ಪ್ರಕಾರ ಕಟ್ಟಡ ನಿರ್ಮಿಸಲು ಗಮನ ನೀಡಲಾಗಿದೆ. ನಾವು ವಿಚಾರವಂತರಾದರೂ ವಿಚಾರವನ್ನು ಆಚಾರಕ್ಕೆ ತರುವುದರಲ್ಲಿ ಎಡವುತ್ತೇವೆ. ನಿಖರ ವಾಸ್ತುವಿನಿಂದ ನೆಮ್ಮದಿ ಕಾಣಬಹುದು ಎಂದು ಹೇಳಿದರು.
ಉದ್ಯಾವರ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಡೀನ್ ಡಾ.ವೈ.ಎನ್.ಶೆಟ್ಟಿ, ಪ್ರೊಫೆಷನಲ್ ಕೋರಿಯರ್‌ನ ಸಿಇಒ ನರೇಂದ್ರನಾಥ್ ನಾಯಕ್, ಮಂಗಳೂರಿನ ಸೇಲ್ಸ್ ಟೇಕ್ಸ್‌ನ ಗೀತಾನಂದ ಪೈ, ಮುಂಬೈ ಹೊಟೇಲ್ ಏರ್‌ಲೈನ್ಸ್ ಮಾಲಕ ಸುಂದರ್ ರಾಜ್ ಹೆಗ್ಡೆ ಇದ್ದರು.
ವಾದ್ಯ ಹಾಗೂ ವೇದ ಘೋಷದೊಂದಿಗೆ ಪಂಚಕನ್ಯೆಯರು ಬಿಡುಗಡೆಗೊಳ್ಳುವ ಕೃತಿಯನ್ನು ಮೆರವಣಿಗೆಯಲ್ಲಿ ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement