ವಿಪತ್ತು ನಿರ್ವಹಣೆ ಸಭೆ ನಿರ್ಣಯ ಜಾರಿಗೆ ಆಗ್ರಹ
ಮಂಗಳೂರು: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ವಿಪತ್ತು ನಿರ್ವಹಣೆ ಸಭೆಯ ನಿರ್ಣಯಗಳನ್ನು ಕಟ್ಟುನಿಟ್ಟು ಜಾರಿಗೆ ತರುವಂತೆ ಪುತ್ತೂರಿನ ಸಿ.ಎಸ್.ಶಾಸ್ತ್ರಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ವಿಪತ್ತು ನಿರ್ವಹಣೆ ಕುರಿತು ಕಳೆದ ವರ್ಷ ಏ.10ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಆದರೆ ಮಾಹಿತಿ ಹಕ್ಕಿನಲ್ಲಿ ಪಡೆದ ಮಾಹಿತಿಯಂತೆ ಈವರೆಗೆ ಸಭೆಯ ನಿರ್ಣಯ ಜಾರಿಯಾಗಿಲ್ಲ. ಮೊನ್ನೆ ಏ.13ರಂದು ಗುಂಡ್ಯದಲ್ಲಿ ಅನಿಲ ಟ್ಯಾಂಕರ್ ಅಪಘಾತಕ್ಕೆ ಒಳಗಾಗಿತ್ತು. ಕಳೆದ ವರ್ಷ ಪೆರ್ನೆಯಲ್ಲಿ ನಡೆದ ಭಾರೀ ದುರಂತದಲ್ಲಿ ಜೀವಹಾನಿ, ಸೊತ್ತು ಹಾನಿ ಸಂಭವಿಸಿದ್ದು ಜಿಲ್ಲಾಡಳಿತಕ್ಕೆ ತಿಳಿಯದ ವಿಷಯವೇನಲ್ಲ. ಹಾಗಿರುವಾಗ ವಿಪತ್ತು ನಿರ್ವಹಣೆಯ ನಿರ್ಣಯ ಅನುಷ್ಠಾನ ಗೊಳಿಸಲು ಜಿಲ್ಲಾಡಳಿತ ಯಾಕೆ ಮೀನಮೇಷ ಎಣಿಸುತ್ತಿದೆ ಎಂದು ಪ್ರಶ್ನಿಸಿದ ಅವರು, ಪೆರ್ನೆ ದುರಂತದಂತೆ ಇನ್ನೊಂದು ದುರಂತಕ್ಕೆ ಜಿಲ್ಲಾಡಳಿತ ಕಾಯುತ್ತಿದೆಯೇ ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ. ಆದ್ದರಿಂದ ತಕ್ಷಣ ಜಿಲ್ಲಾಡಳಿತ ಗಮನಹರಿಸಿ ಪ್ರತ್ಯೊಂದು ನಿರ್ಣಯ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.