ವೇಣೂರು ಜಾತ್ರೆ; ಸಂಭ್ರಮದ ಚಂದ್ರಮಂಡಲ ರಥೋತ್ಸವ
ಬೆಳ್ತಂಗಡಿ: ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು ಏ. 23ರವರೆಗೆ ನಡೆಯಲಿದೆ. ಭಾನುವಾರ ಏಕಾದಶ ರುದ್ರಾಭಿಷೇಕ, ರಾತ್ರಿ ದರ್ಶನ ಬಲಿ, ನೂತನ ಚಂದ್ರಮಂಡಲ ರಥೋತ್ಸವ, ಬಳಿಕ ಕಲ್ಕುಡ ಕಲ್ಲುರ್ಟಿ ಕೋಲ ನಡೆಂಯಿತು.
22ರಂದು ಮಹಾ ರಥೋತ್ಸವ ವಿಶೇಷ ಸೇವಾದಿಗಳು ನಡೆಯಲಿವೆ. ಇದೇ ಸಂದರ್ಭ ಪ್ರತಿ ದಿನ ಸಂತರ್ಪಣೆ, ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆ, ವಸಂತಕಟ್ಟೆ ಪೂಜೆ, ಉತ್ಸವಾದಿಗಳು ನಡೆಯಲಿವೆ.
ಜಾತ್ರಾಪ್ರಯುಕ್ತ ವೇಣೂರು ಐಸಿರಿ ಕಲಾವಿದರಿಂದ ಮತ್ತು ಕುತ್ಲೂರು ಹವ್ಯಾಸಿ ಕಲಾವಿದರಿಂದ ನಾಟಕಗಳು, ವೇಣೂರು ಮಹಿಳಾಮಂಡಲದ ಸಂಗೀತಾ ಶಾಲೆ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ, ವೇಣೂರಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ವತಿಯಿಂದ ತಾಳಮದ್ದಳೆ, ಮಂಗಳೂರಿನ ಸನಾತನ ನಾಟ್ಯಾಲಯ ಇವರಿಂದ ಗೀತ- ನೃತ್ಯ ಮತ್ತು ವೇಣೂರು ಯಕ್ಷಬಳಗದವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ವಿಶ್ವನಾಥ ಪೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.