ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗೃಹ ಸಚಿವ ಜಾರ್ಜ್‌ಗೆ ಪೂಜಾರಿ ಚಾರ್ಜ್

Rashmi Kasaragodu
Updated On : 22 Apr 2014, 12:24 pm

ಮಂಗಳೂರು: ರಾಜ್ಯದ ಗೃಹ ಮಂತ್ರಿಗೆ ಏನಾಗಿದೆ? ಕೇರಳಕ್ಕೆ ಹೋದ ನಂತರ ಘಟನಾ ಸ್ಥಳಕ್ಕೆ ಬಂದುಹೋಗಲು ಆಗುತ್ತಿಲ್ಲವೇ? ನೀವು ಗೃಹ ಮಂತ್ರಿಯಾಗಿ ಸರ್ಕಾರಕ್ಕೆ ಗೌರವ ತರುವ ವಿಚಾರ ಇದುವೇ...?
ಹೀಗೆ ಗೃಹ ಸಚಿವ ಕೆ.ಜೆ.ಜಾರ್ಜ್‌ರನ್ನು ತರಾಟೆಗೆ ತೆಗೆದುಕೊಂಡದ್ದು ಮತ್ಯಾರೂ ಅಲ್ಲ, ರಾಜ್ಯದಲ್ಲಿ ಆಡಳಿತ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದ ಪೂಜಾರಿ, ಶೃಂಗೇರಿ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸಾವಿಗೀಡಾದ ಘಟನೆ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ತನಿಖೆ ಶೈಲಿಗೆ ಖಾರವಾಗಿ ಆಕ್ಷೇಪ ವ್ಯಕ್ತಪಡಿಸಿದ ರೀತಿ ಇದು.
ಎಂದಿನಂತೆ ತಮ್ಮದೇ ಶೈಲಿಯಲ್ಲಿ ಮಾತನಾಡಿದ ಪೂಜಾರಿ, ಸುದ್ದಿಗೋಷ್ಠಿಯುದ್ದಕ್ಕೂ ಗೃಹ ಸಚಿವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಮುಗಿಸುವ ಕೆಲ್ಸವೇ?: ನಿಮ್ಮ ನಿರ್ಲಕ್ಷದಿಂದ ಮುಖ್ಯಮಂತ್ರಿಗೆ ತೊಂದರೆ ಆಗುತ್ತದೆ. ಮುಖ್ಯಮಂತ್ರಿಯನ್ನು ಮುಗಿಸುವ ಕೆಲಸ ಮಾಡುತ್ತಿದೀರಾ? ಮುಖ್ಯಮಂತ್ರಿ ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಅವರ ಹಾದಿಗೆ ಅಡ್ಡ ಬರಬೇಡಿ ಎಂದು ಜಾರ್ಜ್‌ಗೆ ಪೂಜಾರಿ ಕಿವಿ ಮಾತು ಹೇಳಿದರು.
ಸಿಬಿಐಗೆ ಕೊಡಿ: ಶೂಟೌಟ್ ಪ್ರಕರಣವನ್ನು ಸಿಐಡಿ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿದರೆ ಸಾಲದು. ಅದರಿಂದ ನಿರೀಕ್ಷಿತ ನ್ಯಾಯ ಸಿಗುವ ವಿಶ್ವಾಸವಿಲ್ಲ. ಆದ್ದರಿಂದ ಸಿಬಿಐ ತನಿಖೆಗೆ ಕೂಡಲೇ ವಹಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಒತ್ತಾಯಿಸಿದರು.
ಡಿಐಜಿಗೆ ಪ್ರಶ್ನೆ: ನಿಮಗೆ (ಪೊಲೀಸ್ ಇಲಾಖೆಗೆ) ಕೊಲ್ಲುವ ಅಧಿಕಾರ ಕೊಟ್ಟವರು ಯಾರು? ಈವರೆಗೆ ಯಾವುದೇ ತಪ್ಪಿತಸ್ಥ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಅದರ ಬದಲು ಶೂಟೌಟ್ ನಡೆಸಿದವರನ್ನೇ ಸಮರ್ಥಿಸಲು ಮುಂದಾಗುತ್ತೀರಾ ಎಂದು ಗೃಹ ಸಚಿವ ಜಾರ್ಜ್ ಅವರನ್ನು ಗುರಿಯಾಗಿಸಿ ಮಾತನಾಡಿದರು.
ವಿನಾ ಕಾರಣ ಪೊಲೀಸರು ಶೂಟೌಟ್ ನಡೆಸಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಯಾಕೆ ಕ್ರಮಕೈಗೊಳ್ಳುತ್ತಿಲ್ಲ. ಆ ಪೊಲೀಸರಿಗೆ ಸಂಘಪರಿವಾರದ ನಂಟಿನ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಆಗ್ರಹಿಸಿದರು.
ಮೋದಿ ಗೆದ್ದರೆ ದುರಂತ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗೆದ್ದರೆ ಅದು ಭಾರತದ ದುರಂತ ಎಂದು ಟೀಕಿಸಿದರು ಪೂಜಾರಿ.
ಮೋದಿ ಹಿಡನ್ ಅಜೆಂಡಾ ಹೊಂದಿದ್ದು, ಅವರು ಪ್ರಧಾನಿಯಾದರೆ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ, ರಾಮಮಂದಿರ ನಿರ್ಮಾಣ ಸೇರಿದಂತೆ ಎಲ್ಲ ವಿಚಾರಗಳಲ್ಲೂ ದೇಶ ತುಂಡಾಗುತ್ತದೆ ಎಂದರು ಆತಂಕ ವ್ಯಕ್ತಪಡಿಸಿದರು.
ಮೋದಿ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗುವಂತೆ ಬಿಹಾರದಲ್ಲಿ ಗಿರಿರಾಜ ಸಿಂಗ್ ನೀಡಿದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯಿಸಿದ ಪೂಜಾರಿ, ನಾನೂ ಸಹಿತ ಬಿಜೆಪಿ ವಿರೋಧಿಸುವ ಎಲ್ಲ ಪಕ್ಷಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರಾ? ಎಂದು ಪ್ರಶ್ನಿಸಿದರು. ಈ ರೀತಿ ಹೇಳಿಕೆ ನೀಡುವವರನ್ನೇ ದೇಶದಿಂದ ಹೊರಹಾಕಬೇಕು ಎಂದು ಹೇಳಿದರು.  
ಮುಖಂಡರಾದ ಕೋಡಿಜಾಲು ಇಬ್ರಾಹಿಂ, ವಿಜಯ ಕುಮಾರ್ ಶೆಟ್ಟಿ, ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಐವನ್ ಡಿಸೋಜ, ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement