ವಾಯುಮಾಲಿನ್ಯ ನಿಯಂತ್ರಿಸಿ, ನಗರಾರಣ್ಯ ರಕ್ಷಿಸಿ
ನಾರಾಯಣ ಹೆಗಡೆ
ಹಾವೇರಿ: ರಸ್ತೆಗಳಲ್ಲಿ ಮನುಷ್ಯರಿಗಿಂತ ಹೆಚ್ಚಿನ ವಾಹನಗಳು, ಎಲ್ಲಿ ನೋಡಿದರೂ ಕಪ್ಪು ಹೊಗೆ, ವಾಹನಗಳ ಕರ್ಕಶ ಶಬ್ದದಿಂದ ನಗರ ಜೀವನ ನರಕವಾಗುತ್ತಿದೆ. ಇಂಧನದಿಂದ ಹೊರಸೂಸುವ ವಿಷಾನಿಲ ಹಸಿರನ್ನು ಮಾಯ ಮಾಡುತ್ತಿದೆ. ಕಾಲ ಮಿಂಚಿದ್ದರೂ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಗರಗಳು ಅಕ್ಷರಶಃ ನರಕವಾಗುವುದರಲ್ಲಿ ಅನುಮಾನವಿಲ್ಲ.
ಇಂದು ವಿಶ್ವ ಭೂಮಿ ದಿನಾಚರಣೆ. ಹಸಿರು ನಗರ ಪ್ರದೇಶ ಎಂಬ ಘೋಷ ವಾಕ್ಯದೊಂದಿಗೆ ಏ. 22ರಂದು ವಿಶ್ವದ 192 ರಾಷ್ಟ್ರಗಳಲ್ಲಿ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಮಿತಿ ಮೀರಿದ ಇಂಧನ ಬಳಕೆ ಹಾಗೂ ಅದರಿಂದ ಉಂಟಾಗುತ್ತಿರುವ ವಾಯು ಮಾಲಿನ್ಯದ ಪರಿಣಾಮ ನಗರಗಳಲ್ಲಿ ಹಸಿರು ಮಾಯವಾಗುತ್ತಿದೆ. ವಿಪರೀತ ನಗರೀಕರಣದ ಪರಿಣಾಮದಿಂದ ಒಂದೆಡೆ ಹಸಿರು ಮಾಯವಾಗುತ್ತಿದ್ದರೆ, ವಾಯು ಮಾಲಿನ್ಯದಿಂದಲೂ ನಗರದ ಅರಣ್ಯಗಳು ನಶಿಸುತ್ತಿವೆ. ನಗರವನ್ನು ಕಾಂಕ್ರಿಟ್ ಕಾಡನ್ನಾಗಿ ಬೆಳೆಯಲು ಬಿಡದೇ ಹಸಿರು ನಗರ ಪ್ರದೇಶವನ್ನಾಗಿ ಮಾಡುವುದು 2014ರ ಭೂ ದಿನಾಚರಣೆ ಉದ್ದೇಶ. ಈ ಉದ್ದೇಶ ಈಡೇರಲು ಪ್ರಕೃತಿ ಸಂಪತ್ತಿನ ಪಾಲುದಾರರಾದ ನಾವು ಮೊದಲು ಬದಲಾಗಬೇಕು.
ಮಾಯವಾಗುತ್ತಿದೆ ಹಸಿರು: 1969ರಿಂದ ನಾವು ಪ್ರತಿ ವರ್ಷ ಭೂ ದಿನಾಚರಣೆ ಆಚರಿಸುತ್ತ ಬಂದಿದ್ದೇವೆಯೇ ವಿನಃ ಅದರ ಉದ್ದೇಶಗಳ ಅನುಷ್ಠಾನಕ್ಕಾಗಿ ಪ್ರಯತ್ನಿಸಿಲ್ಲ. ಅದರ ದುಷ್ಪರಿಣಾಮವನ್ನು ನಾವಿಂದು ಉಣ್ಣುತ್ತಿದ್ದೇವೆ. ಹಸಿರು ನಗರ ಪ್ರದೇಶಗಳ ಸಂರಕ್ಷಣೆಗೆ ಇಂದು ಯಥೇಚ್ಛವಾಗಿ ಬಳಕೆಯಾಗುತ್ತಿರುವ ಡೀಸೆಲ್, ಪೆಟ್ರೋಲ್‌ಗಳೇ ಕಾರಣವಾಗಿವೆ. ಇಂಧನಗಳ ಅತಿಯಾದ ಬಳಕೆಯಿಂದ ಭೂಗರ್ಭದ ನೈಸರ್ಗಿಕ ಸಂಪತ್ತು ಅವನತಿಯಾಗುತ್ತಿರುವುದು ಕಳವಳಕಾರಿ ಸಂಗತಿ.
ನಾವೇನು ಮಾಡಬೇಕು?
ವಾಹನಗಳಿಂದ ನಗರ ಅರಣ್ಯಕ್ಕೆ ಆಗುತ್ತಿರುವ ದೌರ್ಜನ್ಯ ನಿಲ್ಲಬೇಕೆಂದರೆ ನಾವು ಕೆಲ ಕ್ರಮಗಳನ್ನು ಅನುಸರಿಬೇಕು.
ಟಿ ಆಗಾಗ ವಾಯುಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ವಾಹನ ತಪಾಸಣೆ ಮಾಡಿಕೊಂಡು ವಾಯು ಮಾಲಿನ್ಯ ಹತೋಟಿಯಲ್ಲಿದೆ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
ಟಿ ಮಿತಿಗಿಂತ ಹೆಚ್ಚು ಹೊಗೆ ಸೂಸುತ್ತಿದ್ದಲ್ಲಿ ಕೂಡಲೇ ವಾಹನ ದುರಸ್ತಿ ಮಾಡಿಸಿಕೊಳ್ಳಬೇಕು.
ಟಿ ಅಧಿಕೃತ ಇಂಧನ ಪೂರೈಕೆ ಕೇಂದ್ರದಲ್ಲೇ ಇಂಧನ ಭರ್ತಿ ಮಾಡಿಕೊಳ್ಳಬೇಕು.
ಟಿ ಕಡಿಮೆ ಅಂತರವಿದ್ದಲ್ಲಿ ವಾಹನ ಬಳಸದೇ ನಡೆದುಕೊಂಡೇ ಹೋಗಬೇಕು.
ಟಿ ಕರ್ಕಶ ಧ್ವನಿ ಹೊರಡಿಸುವ ಹಾರ್ನ್ ಬೇಡ, ಅಗತ್ಯವಿದ್ದಲ್ಲಿ ಮಾತ್ರ ಹಾರ್ನ್ ಹಾಕಬೇಕು.
ಟಿ ಪ್ಲಗ್, ಸ್ಟಾರ್ಟರ್, ಕಾರ್ಬೇಟರ್‌ಗಳನ್ನು ಆಗಾಗ ತಪಾಸಣೆ ಮಾಡಿಸಿಕೊಂಡು ಸುಸ್ಥಿತಿಯಲ್ಲಿಟ್ಟುಕೊಳ್ಳಿ.
ಈ ಕ್ರಮಗಳನ್ನು ಪಾಲಿಸುವುದು ಕಷ್ಟವೇನಲ್ಲ. ಈ ನಿಯಮಗಳನ್ನು ಸ್ವತಃ ಅಳವಡಿಸಿಕೊಂಡು ನಗರ ಅರಣ್ಯ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಬೇಕಿದೆ. ವಿಶ್ವ ಭೂ ದಿನಾಚರಣೆ ಏ. 22ಕ್ಕೆ ಮಾತ್ರ ಸೀಮಿತವಾಗದೇ ನಿತ್ಯೋತ್ಸವವಾಗಬೇಕು. ಪ್ರತಿಯೊಬ್ಬರೂ ಪ್ರಕೃತಿಯ ಆರಾಧಕನಾಗಬೇಕು. ವಿಶ್ವ ಭೂಮಿ ದಿನಾಚರಣೆಯನ್ನು ನಿತ್ಯೋತ್ಸವವನ್ನಾಗಿ ಮಾಡುವುದರೊಂದಿಗೆ ಪ್ರಕೃತಿಯ ದೇಗುಲದಲ್ಲಿ ಆನಂದವೇ ಪೂಜೆಯಾಗಬೇಕು. ಮೌನವೇ ಸ್ತೋತ್ರವಾಗುವ ಮೂಲಕ ನಗರದಲ್ಲೂ ಹಸಿರು ಕಂಗೊಳಿಸಿ, ಪಕ್ಷಿಗಳ ಇಂಚರ ಕೇಳುವಂತಾಗಬೇಕು ಎಂಬುದು ನಮ್ಮ ಆಶಯ.