ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯದ ಏಕೈಕ ಜೈನ ಬಸದಿ ಮೇ 9ರಂದು ಲೋಕಾರ್ಪಣೆ

Rashmi Kasaragodu
Updated On : 22 Apr 2014, 12:25 pm

ಸುಳ್ಯ: ಸುಳ್ಯ ತಾಲೂಕಿನ ಏಕೈಕ ಜೈನ ಬಸದಿಯಾಗಿರುವ ಬಲ್ನಾಡುಪೇಟೆ ಶ್ರೀಆದೀಶ್ವರ ಬಸದಿ ಮೇ 9ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಮೇಲುಸ್ತುವಾರಿ ಮುಖಂಡ ಪ್ರಭಾತ್ ಜೈನ್ ಎ. ಹೇಳಿದ್ದಾರೆ.
 ಬಸದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 7 ಶತಮಾನಗಳ ಹಿಂದಿನ ಪ್ರಾಚೀನ ಜಿನಮಂದಿರವು 1956ರಲ್ಲಿ ನವೀಕರಣಗೊಂಡಿದ್ದು, ಶಾಂತಿರಾಜ ಶೆಟ್ಟಿ ಮತ್ತು ಅವರ ತಮ್ಮ ಬ್ರಹ್ಮಯ್ಯ ಶೆಟ್ಟಿ ನೇತೃತ್ವದಲ್ಲಿ ಪಂಚ ಕಲ್ಯಾಣ ಮಹೋತ್ಸವ ನೆರವೇರಿಸಲಾಗಿತ್ತು. ಬಳಿಕ ಬಸದಿಯ ಗೋಡೆ ಮತ್ತು ಛಾವಣಿ ಶಿಥಿಲಗೊಂಡ ಕಾರಣ ಬಸದಿಯನ್ನು ಪೂರ್ತಿಯಾಗಿ ತೆಗೆದು ಕಾರ್ಕಳ ಲಲಿತ ಕೀರ್ತಿ ಸ್ವಾಮೀಜಿ  ಸಲಹೆಯಂತೆ ಮೂಲ ಆಯ ಇಟ್ಟುಕೊಂಡು ತಳಪಾಯದಿಂದಲೇ ಶಿಲಾಮಯ ಗರ್ಭಗುಡಿ ಸಮೇತ ಮೂರು ಛಾವಣೆಗಳ ನೂತನ ಜಿನಮಂದಿರ ನಿರ್ಮಾಣ ಮಾಡಲಾಯಿತು ಎಂದರು.
 ಬಸದಿಯಲ್ಲಿ ಮೂಲಸ್ವಾಮಿ ಶ್ರೀಆದಿನಾಥ ಸ್ವಾಮಿಯಾಗಿದ್ದು, ಮೇಗಿನ ನೆಲೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೂಲಸ್ವಾಮಿಯ ಮುಖ್ಯದ್ವಾರ ಮೂಡು ದಿಕ್ಕಿಗೆ ಇಟ್ಟಿದ್ದು, ಶ್ರೀ ಪದ್ಮಾವತಿ ದೇವಿಯ ದ್ವಾರ ಉತ್ತರ ದಿಕ್ಕಿಗೆ ಇದೆ. ಮೂಲನಾಯಕ ಶ್ರೀ ಆದಿನಾಥ ಸ್ವಾಮಿಯ ಬಲಬದಿಗೆ ಶ್ರೀಬ್ರಹ್ಮ ಯಕ್ಷನ ವಿಗ್ರಹವು ಕುದುರೆ ಮೇಲೆ ವಿರಾಜಮಾನವಾಗಿ ನಿಲ್ಲಿಸಲಾಗುತ್ತದೆ. ಅಭೀಷ್ಠ ವರಪ್ರದಾಯಿನಿ ಬಾಲಾರ್ಕವರ್ಣಿ ಪದ್ಮಾವತಿ ದೇವಿ, ಆಯುಧಪಾಣಿ ಕ್ಷೇತ್ರಪಾಲ ಮತ್ತು ನಾಗದೇವರು ಕಾರಣಿಕದ ಸಾನ್ನಿಧ್ಯವಾಗಿರುವುದು ಈ ಬಸದಿಯ ವೈಶಿಷ್ಟ್ಯವಾಗಿದೆ ಎಂದು ಅವರು ತಿಳಿಸಿದರು.
 ಮೇ 9, 10 ಮತ್ತು 11ರಂದು ಪುನರ್‌ಪ್ರತಿಷ್ಠೆ, ಪೂರ್ವಕ ಧಾಮಸಂಪ್ರೋಕ್ಷಣಾ ಮಹೋತ್ಸವ ನಡೆಯಲಿದೆ. ಮೇ 11ರಂದು ಮೂಲಸ್ವಾಮಿ 1008 ಶ್ರೀ ಆದಿನಾಥ ಸ್ವಾಮಿಯ ಮತ್ತು ಮೇಗಿನ ನೆಲೆಯಲ್ಲಿ 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಪ್ರತಿಷ್ಠೆ ವೈಭಯುತವಾದ ಮೆರವಣಿಗೆಯೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದರು.
ರು. 45 ಲಕ್ಷ ವೆಚ್ಚದಲ್ಲಿ ಬಸದಿ ನಿರ್ಮಾಣ: ಕಾರ್ಕಳ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಬಸದಿಯ ನವೀಕರಣ ರು. 45 ಲಕ್ಷ ವೆಚ್ಚದಲ್ಲಿ ಪೂರ್ಣಗೊಳ್ಳುತ್ತಿದೆ. ಮಹೋತ್ಸವವು ರು. 10 ಲಕ್ಷ ವೆಚ್ಚದಲ್ಲಿ ನಡೆಯಲಿದೆ ಎಂದು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ.
 ಗೋಷ್ಠಿಯಲ್ಲಿ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯುವರಾಜ ಜೈನ್, ಆಡಳಿತ ಮೊಕ್ತೇಸರ ಬಿ. ದೇವಪಾಲ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಮಹಾವೀರ ಜೈನ್, ಪ್ರತಿಷ್ಠಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ. ನಾಗಕುಮಾರ ಶೆಟ್ಟಿ, ಕಾರ್ಯದರ್ಶಿ ಲೋಕನಾಥ ಜೈನ್, ಖಜಾಂಚಿ ಪ್ರದೀಪ ಬಲ್ನಾಡು, ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಯುವರಾಜ್ ಜೈನ್, ಬಾಲಕೃಷ್ಣ, ಮಲ್ಲೇಶ ಬೆಟ್ಟಂಪಾಡಿ, ಲಿಂಗಪ್ಪ ನಾಯ್ಕ, ನಾರಾಯಣ ನಾಯ್ಕ, ಪುರ ವಾಸುದೇವ ಮತ್ತು ಒಕ್ಕೂಟ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement