14 ವರ್ಷದ ಬಾಲಕಿ ಮೇಲೆ ಸತತ ಎರಡು ದಿನ ಅತ್ಯಾಚಾರ
ವಿಟ್ಲ: ಉರಿಮಜಲು ಸಮೀಪದ ಕೋಲ್ಪೆ ಎಂಬಲ್ಲಿ ಬಾಲಕಿ ಮೇಲೆ ಇಬ್ಬರು ಸತತ ಎರಡು ದಿನಗಳ ಕಾಲ ಅತ್ಯಾಚಾರ ನಡೆಸಿದ್ದಾರೆ. ಈ ವಿಷಯ ತಿಳಿದ ಮತ್ತೊಬ್ಬ ವ್ಯಕ್ತಿ ತನ್ನ ಜೊತೆ ಬರುವಂತೆ ಬಾಲಕಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ರಾಧುಕಟ್ಟೆ ನಿವಾಸಿ ಅಬ್ದುಲ್ ಬಶೀರ್, ವಿಟ್ಲ ಕಸಬಾ ಗ್ರಾಮದ ಬೊಬ್ಬೆಕೇರಿ ನಿವಾಸಿ ಬಶೀರ್, ಕುಳ ಗ್ರಾಮದ ಕಾರ್ಯಾಡಿ ನಿವಾಸಿ ಜಬ್ಬಾರ್ ಆರೋಪಿಗಳು. ಮೂವರು ವಿವಾಹಿತರಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ.
ಇಡ್ಕಿದು ಗ್ರಾಮದ ಉರಿಮಜಲು ಸಮೀಪದ ಕೋಲ್ಪೆ ಗ್ರಾಮದ 14 ವರ್ಷದ ಬಾಲಕಿಯೇ ಅತ್ಯಾಚಾರಕ್ಕೊಳದಾಗ ಸಂತ್ರಸ್ತೆ. ಕೆಲವು ದಿನಗಳ ಹಿಂದೆ ಬಾಲಕಿ ವಿಟ್ಲ ಪೇಟೆಯಲ್ಲಿ ಮೊಬೈಲ್ಗೆ ಕರೆನ್ಸಿ ಹಾಕಿಸುವಾಗ ಬೊಬ್ಬೆಕೇರಿ ಬಶೀರ್ ಫೋನ್ ನಂಬರ್ ಪಡೆದಿದ್ದ. ಬಳಿಕ ಪ್ರತಿದಿನ ಬಾಲಕಿಗೆ ಕರೆ ಮಾಡಿ ಪುಸಲಾಯಿಸಿದ್ದಾನೆ. ಏ.18ರಂದು ರಾತ್ರಿ ಬಾಲಕಿಗೆ ಕರೆ ಮಾಡಿದ ಬಶೀರ್ ಬಾಲಕಿಯನ್ನು ಕಾರಿನಲ್ಲಿ ಮಡಿಕೇರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬೊಬ್ಬೆಕೇರಿ ಬಶೀರ್ನೊಂದಿಗೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಗೆ ತಂದು ಬಿಟ್ಟಿದ್ದಾನೆ. ಅಲ್ಲದೇ ಏ.19ರಂದು ಕರೆ ಮಾಡಿ ಮನೆಗೆ ಕರೆಸಿಕೊಂಡು ಮತ್ತೆ ಅತ್ಯಾಚಾರವೆಸಗಿದ್ದಾನೆ. ಇದನ್ನು ತಿಳಿದ ಕಾರ್ಯಾಡಿ ಜಬ್ಬಾರ್ ಬಾಲಕಿಗೆ ಕರೆ ಮಾಡಿ ತನ್ನ ಜೊತೆ ಬರಬೇಕು ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.