ಸುದ್ದಿ ಸಂಕ್ಷೇಪ
ಮಕ್ಕಳ ಕಲ್ಯಾಣ ಇಲಾಖೆ ಮಡಿಲು ಸೇರಿದ ಮೂವರು ಮಕ್ಕಳು
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಶಾಲೆತಡ್ಕ ಶಾಲೆ ಮನೆ ನಿವಾಸಿ ಅಣ್ಣಯ್ಯ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಆಕೆ ಪ್ರಿಯಕರ ನ್ಯಾಯಾಂಗ ಬಂಧನಕ್ಕೊಳಗಾದ ಬಳಿಕ ತಬ್ಬಲಿಗಳಾದ ಮೂವರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಪಡೆದುಕೊಂಡಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಮಂಗಳೂರಿನ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದರೆ, ನಾಲ್ಕು ವರ್ಷದ ಬಾಲಕನನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಸೇರಿಸಲಾಗಿದೆ. ಮೃತ ಅಣ್ಣಯ್ಯ ಗೌಡ ಮತ್ತು ಪತ್ನಿ ಅಮಿತಾ ದಂಪತಿ ಮಕ್ಕಳಾದ ಅಂಕಿತಾ (15), ಅನ್ವಿತಾ(10), ಮತ್ತು ಅನುಷ್ (4)ನನ್ನು ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಉಪ್ಪಿನಂಗಡಿ ಪೊಲೀಸರು ಒಪ್ಪಿಸಿದರು. ಅಂಕಿತಾ ಮತ್ತು ಅನ್ವಿತಾಳನ್ನು ಅವರ ಸಂಬಂಧಿಕರು ಪಡೆದುಕೊಂಡಿದ್ದರು. ಆದರೆ ಅವರ್ಯಾರೂ ಲಿಖಿತವಾಗಿ ಇವರನ್ನು ಸಾಕುವ ಬಗ್ಗೆ ಭರವಸೆ ನೀಡದ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದರು.
ನೀತಿ ಸಂಹಿತೆ ಮತ್ತಷ್ಟು ಸಡಿಲ
ಬೆಂಗಳೂರು: ರಾಜ್ಯದಲ್ಲಿ ಚುನಾವಣೋತ್ತರ ನೀತಿ ಸಂಹಿತೆ ಮತ್ತಷ್ಟು ಸಡಿಲಿಕೆಯಾಗಿದೆ. ಚುನಾವಣಾ ಆಯೋಗ ಈ ಬಾರಿ ಹೆಚ್ಚಿನ ರೀತಿಯಲ್ಲಿ ನೀತಿ ಸಂಹಿತೆ ಸಡಿಲಿಸಿದ್ದು, ಸರ್ಕಾರ ಹೊಸ ಯೋಜನೆ ಮತ್ತು ಘೋಷಣೆಗಳನ್ನೂ ಮಾಡಬಹುದಾಗಿದೆ. ಅಷ್ಟೇ ಏಕೆ? ಅಧಿಕಾರಿಗಳ ವರ್ಗಾವಣೆ, ನೇಮಕ ಮತ್ತು ಬಡ್ತಿ ನೀಡುವ ಪ್ರಕ್ರಿಯೆಗಳನ್ನು ನಡೆಸಬಹುದು. ಆದರೆ ಚುನಾವಣಾ ನಿರತ ಅಧಿಕಾರಿಗಳನ್ನು ಹೊರತುಪಡಿಸಿ ಎಂಬ ಷರತ್ತು ವಿಧಿಸಲಾಗಿದೆ. ಅಂದರೆ ಸರ್ಕಾರ ಮತ್ತು ಅದೀನ ಸಂಸ್ಥೆಗಳು ಎಲ್ಲಾ ತಮ್ಮ ಎಲ್ಲಾ ಆಡಳಿತ ಕಾರ್ಯಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಎಂದಿನಂತೆ ನಡೆಸಬಹುದು. ಸಚಿವರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಸಭೆ, ಸಮಾರಂಭಗಳನ್ನು ಎಂದಿನಂತೆ ನಡೆಸಬಹುದು. ಆದರೆ ಇದರಲ್ಲಿ ಚುನಾವಣೆ ನಿರತ ಅಧಿಕಾರಿಗಳು ಭಾಗವಹಿಸುವಂತಿಲ್ಲ. ಅವರನ್ನು ಸರ್ಕಾರ ಬಳಸಿಕೊಳ್ಳುವಂತೆಯೂ ಇಲ್ಲ. ಇದಲ್ಲದೆ ಸರ್ಕಾರ ಮತ್ತು ಅಧೀನ ಸಂಸ್ಥೆಗಳು ಹೊಸ ಯೋಜನೆ ಮತ್ತು ಘೋಷಣೆಗಳನ್ನು ಮಾಡಬಹುದಾಗಿದೆ. ಆದರೆ ಆ ಘೋಷಣೆಗಳು ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವಂತಿರಬಾರದು. ಈ ಷರತ್ತು ಮತ ಎಣಿಕೆ ಮುಗಿದು ಚುನಾವಣಾ ನೀತಿ ಸಂಹಿತೆ ಸಂಪೂರ್ಣ ಮುಕ್ತಾಯವಾಗುವವರೆಗೂ ಇರುತ್ತದೆ. ಆನಂತರ ಕೇಂದ್ರ ಆಯೋಗದ ಆದೇಶದಂತೆ ನೀತಿ ಸಂಹಿತೆ ತಶ್ರೆರವುಗೊಳಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಝಾ ತಿಳಿಸಿದ್ದಾರೆ.
ಸಗಣಿ ಪ್ರಕರಣ; ಇನ್ನಿಬ್ಬರ ಬಂಧನ
ಮಂಗಳೂರು: ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಮೇಲೆ ಮಂಗಳೂರಲ್ಲಿ ಸಗಣಿ ಎರಚಿದ ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂದರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಚೇತನ್ ಎಂಬಾತನನ್ನು ಮಂಗಳವಾರ ಬಂಧಿಸಲಾಗಿತ್ತು. ಈ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಬಜರಂಗದಳ ಗೋರಕ್ಷಾ ಪ್ರಮುಖ್ ಪ್ರದೀಪ್ ಮೆಂಡನ್ ಹಾಗೂ ತಿಲಕ್ ಎಂಬಿಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಿಡಿಲಿಗೆ ರೈತ ಸಾವು
ಹಾನಗಲ್ಲ: ಸಿಡಿಲು ಬಡಿದು ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಯುವ ರೈತ ಶಿವಾನಂದ ಯಲ್ಲಪ್ಪ ಯಡಳ್ಳಿ (35) ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ರಾಮತೀರ್ಥ ಹೊಸಕೊಪ್ಪ ಗ್ರಾಮದ ಅನತಿ ದೂರದಲ್ಲಿರುವ ಹೊಲದಲ್ಲಿ ಸೂರ್ಯಕಾಂತಿ ರಾಶಿ ಮಾಡುವಾಗ ಈ ಘಟನೆ ನಡೆದಿದೆ. ಈತನಿಗೆ ಪತ್ನಿ, 3 ಮಕ್ಕಳಿದ್ದಾರೆ.