ಆಸ್ಪತ್ರೆ, ರಕ್ತ ತಪಾಸಣೆ ಕೇಂದ್ರಗಳಿಗೆ ಮನಪಾ ಪತ್ರ: ಮಲೇರಿಯಾ ತಡೆಗೆ ಜಾಗೃತಿ, ಪರಿಹಾರ ಕ್ರಮ
ಮಂಗಳೂರು: ಮಹಾನಗರದಲ್ಲಿ ಮಲೇರಿಯಾ ನಿರ್ಮೂಲನೆ ನಿಟ್ಟಿನಲ್ಲಿ ಮನಪಾ ಎಲ್ಲ ಆಸ್ಪತ್ರೆ ರಕ್ತ ತಪಾಸಣೆ ಕೇಂದ್ರಗಳಿಗೆ ಮನವಿ ಪತ್ರ ಕಳುಹಿಸಿದೆ.
ಮಲೇರಿಯಾ ಪ್ರಕರಣ ಪತ್ತೆಯಾದ ತಕ್ಷಣ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರೆ ರೋಗ ಹಬ್ಬದಂತೆ ಕ್ರಮ ಜರುಗಿಸಲು ನೆರವಾಗುತ್ತದೆ ಎಂದು ಮೇಯರ್ ಮಹಾಬಲ ಮಾರ್ಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಯುಕ್ತರು, ಆರೋಗ್ಯಾಧಿಕಾರಿ ಜತೆ ಸಮಾಲೋಚನೆ ಮಾಡಿ, ಎಲ್ಲ ಆಸ್ಪತ್ರೆ ಮತ್ತು ರಕ್ತ ತಪಾಸಣೆ ಕೇಂದ್ರಗಳಿಗೆ ಮನವಿ ಪತ್ರ ನೀಡುತ್ತಿದ್ದೇವೆ. ಒಂದು ವಾರ ಪರಿಶೀಲನೆ ನಡೆಸುತ್ತೇವೆ. ಮಾಹಿತಿ ಬಾರದೆ ಇದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಲೇರಿಯಾ ನಿರ್ಮೂಲನೆಗೆ 6 ತಿಂಗಳಲ್ಲಿ ನಗರದಲ್ಲಿ ಕಾರ್ಯಕ್ರಮ ನಡೆಸಲಿದ್ದೇವೆ. 2005ಕ್ಕೆ ಹೋಲಿಸಿದರೆ ಮಲೇರಿಯಾ ನಿಯಂತ್ರಣಕ್ಕೆ ಬರುತ್ತಿದ್ದೇವೆ. ಮನಪಾ ಕೆಲಸ ಮಾಡಿದರೂ ಆಸ್ಪತ್ರೆ, ರಕ್ತ ಪರೀಕ್ಷೆ ಕೇಂದ್ರಗಳು ಸಹಕರಿಸದ ಕಾರಣ ಪೂರ್ತಿ ಹತೋಟಿಗೆ ತರಲು ಸಾಧ್ಯವಾಗಿಲ್ಲ.
ಮೂರು ತಿಂಗಳಿಂದ ಆಯುಕ್ತರ ಆದೇಶದ ಮೇರೆಗೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಆಸ್ಪತ್ರೆ, ರಕ್ತ ತಪಾಸಣೆ ಕೇಂದ್ರಗಳಿಗೆ ಮಲೇರಿಯಾ ಪೀಡಿತ ಪ್ರಕರಣ ತಕ್ಷಣ ತಿಳಿಸುವಂತೆ ಸೂಚಿಸಿತ್ತು. ತಕ್ಷಣ ಮಾಹಿತಿ ನೀಡಿದರೆ ಆ ಪ್ರದೇಶಕ್ಕೆ ಹೋಗಿ ಮಲೇರಿಯಾ ನಿಯಂತ್ರಿಸಲು ಸಾಧ್ಯ. ತಡವಾಗಿ ಮಾಹಿತಿ ನೀಡಿದರೆ ಮಲೇರಿಯಾ ಹತೋಟಿಗೆ ತರಲು ಕಷ್ಟವಾಗುತ್ತದೆ. ಶೇ.60 ಕಸದ ತೊಟ್ಟಿಗಳನ್ನು ತೆಗೆಯಲಾಗಿದೆ. ಆದರೆ ಕಸ ತೆಗೆದ ಪ್ರದೇಶದಲ್ಲಿಯೇ ಕಸ ಹಾಕುತ್ತಿದ್ದಾರೆ. ಕಸ ಸಂಗ್ರಹ ಕೆಲವು ವಾರ್ಡ್ಗಳಿಗೆ ಪ್ರಾಯೋಗಿಕ ನೆಲೆಯಲ್ಲಿ ಮಾಡಲಾಗುತ್ತಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ, ಘನತ್ಯಾಜ್ಯ ವಿಲೇವಾರಿ ತೆರಿಗೆ, ಮಾರಾಟ ತೆರಿಗೆ ಹೆಚ್ಚಳ ಕುರಿತು ಮಹಾನಗರ ಪಾಲಿಕೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಮುಖ್ಯಸಚೇತಕ ಶಶಿಧರ ಹೆಗ್ಡೆ, ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ನವೀನ್ ಡಿಸೋಜ ಇದ್ದರು.