ಟೋಲ್ ಪ್ಲಾಝಾ ಪ್ರತಿಭಟನೆಯಲ್ಲಿ ರಾಜಕೀಯ ದ್ವೇಷ ಇಲ್ಲ: ಬಿಜೆಪಿ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುತ್ತಿರುವ ಬಡ ಯುವಕರ ಮೇಲಿನ ಹಲ್ಲೆ ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತೇ ಹೊರತು ಇದರಲ್ಲಿ ತನ್ನ ಸ್ವಂತ ಹಿತಾಸಕ್ತಿ ಅಥವಾ ರಾಜಕೀಯ ದ್ವೇಷ ಇಲ್ಲ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ನ ಕೆಲ ನಾಯಕರು ಸಮಾಜ ಘಾತುಕ ಶಕ್ತಿಗಳ ಮತ್ತು ಕೋಮು ಹಿನ್ನೆಲೆಯುಳ್ಳ ವ್ಯಕ್ತಿಗಳ ತಂಡ ಕಟ್ಟಿಕೊಂಡು ಅಮಾಯಕ ಹಿಂದೂ ಯುವಕರ ಮೇಲೆ ದಾಳಿ ನಡೆಸಿ ನಂತರ ಅವರಿಗೆ ಪೊಲೀಸ್ ರಕ್ಷಣೆ ಕೊಡಿಸುತ್ತಿದ್ದಾರೆ. ಈ ಹಲ್ಲೆ, ಅನಾಚಾರಗಳನ್ನು ಮರೆಮಾಚಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು, ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.