ಟೋಲ್ಗೇಟ್ ತೆರವು ಆಗ್ರಹಿಸಿ ರಾ.ಹೆ. ತಡೆ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲುವಿನಲ್ಲಿ ನಿರ್ಮಿಸಿರುವ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಬ್ರಹ್ಮರಕೂಟ್ಲುವಿನಲ್ಲಿ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ನಡೆಯಿತು.
ಟೋಲ್ಗೇಟ್ನ ಅವ್ಯವಸ್ಥೆ, ಸಿಬ್ಬಂದಿಯ ಅನಾಗರಿಕ ವರ್ತನೆ, ಅನಿಯಮಿತ ಶುಲ್ಕ ವಸೂಲಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಟೋಲ್ ಕೇಂದ್ರವನ್ನು ಇಲ್ಲಿಂದ ತೆರವುಗೊಳಿಸಿ ಬೇರೆಡೆಗೆ ಸ್ಥಳಾಯಿಸುವಂತೆ ಒತ್ತಾಯಿಸಿದರು. ರಸ್ತೆಯಲ್ಲಿ ಕುಳಿತು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಟೋಲ್ ಸಂಗ್ರಹ ಕೇಂದ್ರದೆಡೆಗೆ ನುಗ್ಗಿ ಟೋಲ್ ಸಂಗ್ರಹಿಸದಂತೆ ತಡೆದರು.
ಬಂದೂಕು ತೋರಿಸಿ ಶುಲ್ಕ ವಸೂಲಿ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಚತುಷ್ಪಥ ರಸ್ತೆ ಪೂರ್ಣಗೊಳಿಸದೆ ಇಲ್ಲಿ ಟೋಲ್ ಗೇಟ್ ಸ್ಥಾಪಿಸಲಾಗಿದೆ. ಇಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಟೋಲ್ಗೇಟ್ಗೆ ಪೂರಕವಾದ ಸ್ಥಳಾವಕಾಶವೂ ಇಲ್ಲಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಇದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ಇಲ್ಲಿ ಗಣಕೀಕೃತ ಗೇಟ್ ಅಳವಡಿಕೆ ಇಲ್ಲದಿರುವುದರಿಂದ ಸರಿಯಾದ ಲೆಕ್ಕ ತೋರಿಸದೆ ಸರ್ಕಾರಕ್ಕೆ ವಂಚಿಸಲಾಗುತ್ತಿದೆ. ಪ್ರಯಾಣಿಕರಿಂದಲೂ ನಿಗದಿತ ದರಕ್ಕಿಂತ ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಗೂಂಡಾಗಿರಿ ಮಾಡುತ್ತಿದ್ದ ಬಂದೂಕು ತೋರಿಸಿ ಸುಂಕ ವಸೂಲಿ ಮಾಡುವಂಥ ಕೃತ್ಯವೂ ನಡೆಯುತ್ತಿದೆ ಎಂದು ಆರೋಪಿಸಿದ ಚಂದ್ರಪ್ರಕಾಶ್ ಶೆಟ್ಟಿ, ಕೂಡಲೇ ಟೋಲ್ಗೇಟ್ ತೆರವುಗೊಳಿಸದಿದ್ದರೆ ಸಾರ್ವಜನಿಕರೇ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ಪ್ಲಾಜಾ ನಿರ್ಮಿಸಿರುವುದು ಕಾನೂನು ಬಾಹಿರ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಬಿ. ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಪದ್ಮಶೇಖರ ಜೈನ್, ಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್. ರೊಡ್ರಿಗಸ್, ಪದ್ಮನಾಭ ರೈ, ಪರಮೇಶ್ವರ, ಬಿ.ಕೆ. ಇದಿನಬ್ಬ, ಮಧುಸೂದನ್ ಶೆಣೈ, ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ ಇದ್ದರು.
ಸುಂಕ ವಸೂಲಿಗೆ ತಡೆ: ಟೋಲ್ಪ್ಲಾಜಾದತ್ತ ತೆರಳಿದ ಪ್ರತಿಭಟನಾ ಯುವಕರ ಗುಂಪೊಂದು ಸುಂಕ ನೀಡಲು ಸರದಿಯಲ್ಲಿ ನಿಂತಿದ್ದ ವಾಹನಗಳಿಗೆ ಸುಂಕ ನೀಡದಂತೆ ಸೂಚಿಸಿತು. ಹಾಗಾಗಿ ವಾಹನಗಳು ಸುಂಕ ನೀಡದೆ ನೇರವಾಗಿ ಹೋಗುತ್ತಿದ್ದವು. ಇದರಿಂದ ಆತಂಕದ ವಾತಾರವಣ ಸೃಷ್ಟಿಯಾದರೂ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಬೇಗ ತಿಳಿಯಾಯಿತು.
ರಸ್ತೆ ತಡೆ ಸಂದರ್ಭ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಲ್ಲೇಸ್ವಾಮಿ ಹಾಗೂ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಕೇಂದ್ರ ಭೂ ಸಾರಿಗೆ ಸಚಿವರು, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸದಾಶಿವ ಪ್ರಭು, ಮನವಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.