ಉಚಿತ ಸಾಮೂಹಿಕ ವಿವಾಹ, ಸನ್ಮಾನ ಸಮಾರಂಭ ಇಂದು
ಬಂಟ್ವಾಳ: ಇಲ್ಲಿನ ನವಚೇತನ ಸೇವಾ ಟ್ರಸ್ಟ್ ಆಶ್ರಯದಲ್ಲಿ ರಾಜ್ಯ ದಲಿತ್ ಮಹಾಸಭಾ ಅಂಬೇಡ್ಕರ್ ವೃತ್ತ, ದ.ಕ. ಜಿಲ್ಲಾ ಶಾಖೆ ಸಹಯೋಗದೊಂದಿಗೆ ಡಾ. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ, ಸನ್ಮಾನ ಸಮಾರಂಭ 27ರಂದು ಬಿ.ಸಿ. ರೋಡ್ ಗಾಣದಪಡ್ಪುವಿನ ಬ್ರಹ್ಮ ಶ್ರೀ ಗುರುನಾರಾಯಣ ಮಂದಿರದ ಸಂವಿಧಾನ ಶಿಲ್ಪಿ ವೇದಿಕೆಯಲ್ಲಿ ನಡೆಯಲಿದೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಸಮಾರಂಭ ಉದ್ಘಾಟಿಸಲಿದ್ದು, ಟ್ರಸ್ಟ್ನ ಅಧ್ಯಕ್ಷ ರಾಜಾಪಲ್ಲಮಜಲು ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಉಪಸ್ಥಿತರಿರುವರು. ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಧಿಕಾ, ಕ್ರೀಡಾಪಟು ಅನಿತಾ ಪಿ.ಆರ್ ಅವರನ್ನು ಸನ್ಮಾನಿಸಲಾಗುವುದು ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕಡೇಶ್ವಾಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪಾಜೆ- ಮಾಣಿ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ
ಸುಳ್ಯ: ಮೈಸೂರು- ಮಾಣಿ ರಾಜ್ಯ ಹೆದ್ದಾರಿಯ ಸಂಪಾಜೆ- ಮಾಣಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಶುಕ್ರವಾರ ಪರಿಶೀಲನೆ ನಡೆಸಿದರು. ಸಂಜೆ ಸುಳ್ಯಕ್ಕೆ ಆಗಮಿಸಿದ ಅವರು ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಬಳಿಕ ಅವರು ಪೈಚಾರ್ ಸೇತುವೆ ಕಾಮಗಾರಿ ಪರಿಶೀಲಿಸಿದರು. ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ ಮತ್ತಿತರರು ಕೆಆರ್ಡಿಸಿಎಲ್ ಎಂಜಿನಿಯರ್ಗಳನ್ನು ಈ ಸಂದರ್ಭ ತರಾಟೆಗೆ ತೆಗೆದುಕೊಂಡರು. ಸೇತುವೆಯ ನಕ್ಷೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಕಾಮಗಾರಿಯ ವಿವರ ಪಡೆದು ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಬಳಿಕ ರಾತ್ರಿವರೆಗೂ ನ.ಪಂ.ಸಭಾಂಗಣದಲ್ಲಿ ಕೆಆರ್ಡಿಸಿಎಲ್ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಮಾತುಕತೆ ನಡೆಸಿದರು.