ಕುಡಿವ ನೀರು ಸಮಸ್ಯೆಗೆ ಸ್ಪಂದಿಸಿ: ಸಚಿವ ರೈ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅಗತ್ಯವಿರುವಲ್ಲಿ ಕೂಡಲೇ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಡಿವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದರು. ಮುಂದಿನ 2 ತಿಂಗಳಲ್ಲಿ ಎಲ್ಲ ಜನರಿಗೆ ಸಮಸ್ಯೆಯಾಗದ ರೀತಿ ಅಧಿಕಾರಿಗಳು ಸ್ಪಂದಿಸಬೇಕು. ಅಂತರ್ಜಲ ಕುಸಿದಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ತಹಸೀಲ್ದಾರ್ ಹಾಗೂ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳದ್ದು ಎಂದು ಹೇಳಿದರು. ಈಗಾಗಲೇ ಹಲವು ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ ಎಂದು ಜಿ.ಪಂ. ಸಿಇಒ ತುಳಸಿ ಮದ್ದಿನೇನಿ ಹೇಳಿದರು. ಅಂತರ್ಜಲ ಪುನಶ್ಚೇತನಕ್ಕೆ 368 ಕಾಮಗಾರಿ ನಿರ್ವಹಿಸಲಾಗುತ್ತಿದೆ. ನೀರಿನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ನಾಳೆ ಡೌನ್ಸಿಂಡ್ರೋಂ ಅಕಾಡೆಮಿ ಪ್ರಾರಂಭ
ಮಂಗಳೂರು: ಪುತ್ತೂರಿನ ರೋಟರಿ, ಜೇಸಿ ಮತ್ತು ಮಂಗಳೂರಿನ ಸೇವಾಭಾರತಿ ಟ್ರಸ್ಟ್ ಮಾರ್ಗದರ್ಶನದಲ್ಲಿ ಏ.28ರಂದು ಪುತ್ತೂರಿನ ರೋಟರಿ ಮನಿಷಾ ಕಟ್ಟಡದಲ್ಲಿ ರೋಟಾ ಜೇಸಿ ಡೌನ್ಸಿಂಡ್ರೋಂ ಅಕಾಡೆಮಿ ಆರಂಭವಾಗಲಿದೆ. ಬೆಳಗ್ಗೆ 10ಕ್ಕೆ ಜೇಸಿ ರಾಷ್ಟ್ರೀಯ ಅಧ್ಯಕ್ಷ ದೀಪಕ್ ನಹಾರ್ ಉದ್ಘಾಟಿಸುವರು. ಜೂ.2ರಿಂದ ತರಗತಿ ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರವರೆಗೆ ಬೆಳಗ್ಗೆ 10ರಿಂದ ಸಂಜೆ 3ರ ವರೆಗೆ ತರಗತಿ ಇರುವುದು. 5 ವರ್ಷದಿಂದ 18 ವರ್ಷದೊಳಗಿನ ಡೌನ್ಸಿಂಡ್ರೋಂ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ವಸತಿ ಸೌಲಭ್ಯ ಇರುವುದಿಲ್ಲ. ಮಾಸಿಕ ಶುಲ್ಕ ರು. 300, ಆರ್ಥಿಕ ಹಿಂದುಳಿದವರಿಗೆ ರಿಯಾಯ್ತಿ ನೀಡಲಾಗುವುದು. ಮುಂದಿನ ದಿನದಲ್ಲಿ ಫಿಸಿಯೋಥೆರಪಿ, ವೃತ್ತಿಪರ ತರಬೇತಿ ಹಮ್ಮಿಕೊಳ್ಳಲಾಗುವುದು. ಪ್ರತಿ ತಾಲೂಕಿಗೊಂದರಂತೆ ವಿಶೇಷ ತರಬೇತಿ ಕೇಂದ್ರ ಪ್ರಾರಂಭಿಸುವ ಉದ್ದೇಶವಿದೆ ಎಂದು ಜೇಸಿ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿವರಕ್ಕೆ ಸಂಚಾಲಕ ಉಮೇಶ್ ನಾಯಕ್ರನ್ನು (9844401295)ರನ್ನು ಸಂಪರ್ಕಿಸಬಹುದು.