ಬಸ್ ರೂಟ್ ಸರ್ವೇಗೆ ಆರ್ಟಿಎ ನಿರ್ದೇಶನ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಸ್ ರೂಟ್ಗಳ ಬಗ್ಗೆ ಸರ್ವೇ ನಡೆಸುವಂತೆ ಕೆಎಸ್ಆರ್ಟಿಸಿಗೆ ಜಿಲ್ಲಾ ಸಾರಿಗೆ ಪ್ರಾಧಿಕಾರ ನಿರ್ದೇಶನ ನೀಡಿದೆ.
2010 ಮಾರ್ಚ್ನಲ್ಲಿ ಮುಂದೂಡಲ್ಪಟ್ಟ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದುವರಿದ ಸಭೆಯಲ್ಲಿ ಶನಿವಾರ ಪ್ರಾಧಿಕಾರ ಅಧ್ಯಕ್ಷ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಈ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎ.ಬಿ.ಇಬ್ರಾಹಿಂ, ಮಂಗಳೂರು-ಉಡುಪಿ, ಮಂಗಳೂರು-ಕಾರ್ಕಳ ಹಾಗೂ ಮಂಗಳೂರು-ಬಿಸಿರೋಡ್ ಮಾರ್ಗಗಳ ಬಗ್ಗೆ ಸರ್ವೇ ನಡೆಸುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಹೇಳಿದರು. ಇಲ್ಲಿರುವ ಬಸ್ ಸಂಚಾರ ದಟ್ಟಣೆ, ಹೊಸ ರೂಟ್ಗಳಿಗೆ ಅವಕಾಶದ ಬಗ್ಗೆ ಪರಾಮರ್ಶೆ ನಡೆಸುವಂತೆ ಸೂಚಿಸಿದರು.
ಮಂಗಳೂರು-ಉಡುಪಿ ಮಾರ್ಗಕ್ಕೆ 6 ರೂಟ್ ಪರವಾನಿಗೆ ಕೋರಿದಾಗ, ಮೊದಲು ಖಾಸಗಿ ಬಸ್ ಮಾಲಕರ ಪರ ನ್ಯಾಯವಾದಿಗಳು ವಾದಿಸಿದರು. ಆದರೆ ಆಕ್ಷೇಪ ಹೇಳದ ಕಾರಣ ಪರವಾನಗಿ ಸಿಗುವ ನಿರೀಕ್ಷೆ ಇತ್ತು. ಕೊನೆಕ್ಷಣದಲ್ಲಿ ರೋಟ್ ಸರ್ವೇಗೆ ಸೂಚಿಸುವುದರೊಂದಿಗೆ ಸದ್ಯಕ್ಕೆ ಜಿಲ್ಲಾಧಿಕಾರಿ ಸರ್ಕಾರಿ ಬಸ್ ಸಂಚಾರಕ್ಕೆ ರೆಡ್ಸಿಗ್ನಲ್ ನೀಡಿದರು.
ಮಂಗಳೂರು-ಕಾರ್ಕಳ ವಯಾ ಮೂಡುಬಿದಿರೆ ಹಾಗೂ ಮಂಗಳೂರು-ಬಿಸಿರೋಡ್ ವಯಾ ಮುಡಿಪು ಮಾರ್ಗದಲ್ಲಿ ಸರ್ಕಾರಿ ಬಸ್ ಓಡಾಟಕ್ಕೆ ಖಾಸಗಿಯವರಿಂದ ಆಕ್ಷೇಪ ವ್ಯಕ್ತವಾಯಿತು. ಈ ಮಾರ್ಗದಲ್ಲಿ 18 ಬಸ್ ಓಡಾಟಕ್ಕೆ ಕೆಎಸ್ಆರ್ಟಿಸಿ ಅರ್ಜಿ ಸಲ್ಲಿಸಿತ್ತು. ಇರಾ ಮತ್ತು ತಲಪಾಡಿಯಲ್ಲಿ ಪರವಾನಗಿ ಇದ್ದರೂ ಕೆಎಸ್ಆರ್ಟಿಸಿ ಬಸ್ ಓಡಿಸುತ್ತಿಲ್ಲ. ಮುಡಿಪು ಮಾರ್ಗದಲ್ಲಿ ಸರ್ಕಾರಿ ಬಸ್ ರಸ್ತೆಗಿಳಿಸಿದರೆ, ಖಾಸಗಿ ಬಸ್ ಬಂದ್ ಮಾಡಬೇಕಾಗುತ್ತದೆ ಎಂದು ಬಸ್ ಮಾಲಕರು ಆಕ್ಷೇಪವೆತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ಪರ ವಕೀಲರು, ಒಂದು ರೂಟ್ ಪರವಾನಗಿ ಇದ್ದರೆ ಸಮೀಪದ ರೂಟ್ಗಳಿಗೆ ತೆರಳಬಹುದು. ಕೆಎಸ್ಆರ್ಟಿಸಿ ಸಂಚಾರಕ್ಕೆ ರೂಟ್ ಸರ್ವೇ ಅಗತ್ಯವಿಲ್ಲ ಎಂದು ವಾದಿಸಿದರು.
ಕೊನೆಯಲ್ಲಿ ಖಾಸಗಿ ಬಸ್ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ ಜಿಲ್ಲಾಧಿಕಾರಿ, ಸರ್ಕಾರಿ ಬಸ್ಗೆ ಹೊಸ ರೂಟ್ ಪರವಾನಗಿ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.
ಮಂಗಳೂರು-ಬಿಸಿರೋಡ್ ಮಾರ್ಗ ನಾಲ್ಕು ಪಥವಾಗುವುದರಿಂದ ಸಂಚಾರಕ್ಕೆ ತೊಂದರೆಯಾಗದು ಎಂದು ಆರ್ಟಿಒ ಅಫ್ಜಲ್ ಅಹ್ಮದ್ಖಾನ್ ಹೇಳಿದರು.
ಸಭೆಯಲ್ಲಿ 73 ಮಾರ್ಗಗಳ ಪರವಾನಗಿ ಬಗ್ಗೆ ಚರ್ಚಿಸಲಾಯಿತು. ಬಿಸಿರೋಡ್ ಮೇಲ್ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಇದ್ದರು.