ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಂಟೇನರ್ ಜಾಗದಲ್ಲೀಗ ಕಸ ರಾಶಿ

Rashmi Kasaragodu
Updated On : 30 Apr 2014, 12:58 pm

ಜಿತೇಂದ್ರ ಕುಂದೇಶ್ವರ
ಮಂಗಳೂರು: ನಗರ ಸುಂದರಗೊಳಿಸಲು ಎರಡು ವರ್ಷ ಹಿಂದೆ ಮಹಾನಗರ ಪಾಲಿಕೆ ಮನೆ ಮನೆಯಿಂದ ಕಸ ಸಂಗ್ರಹಕ್ಕೆ ನಿರ್ಧರಿಸಿ ಕಸದ ತೊಟ್ಟಿಗಳನ್ನು ತೆಗೆದರರು. ಆದರೆ ಮನೆ ಮನೆಯಿಂದ ಕಸ ಸಂಗ್ರಹ ಆಗಲಿಲ್ಲ, ತೊಟ್ಟಿ ತೆಗೆದ ಜಾಗದಲ್ಲಿ ಕಸ ರಾಶಿ ರಾಶಿ ಬಿದ್ದು ನಗರ ಸೌಂದರ್ಯ ಬೀದಿ ನಾಯಿ ಪಾಡಾಗಿದೆ !
ಕಸದಿಂದ ಗೊಬ್ಬರ ಮಾಡುವ ಘನತಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕ. ದಕ್ಷಿಣ ವಲಯ ಮತ್ತು ಉತ್ತರ ವಲಯ ಕಸ ಸಂಗ್ರಹಣೆ ಎಂಬುದಾಗಿ ಬಿಜೆಪಿ ಆಡಳಿತದಲ್ಲಿ ಮೂರು ಪ್ಯಾಕೇಜ್ ಮಾಡಲಾಯಿತು. 2012ರ ಡಿ.13ರಂದು ಮುಂಬಯಿಯ ಅಂತೋಣಿ ವೇಸ್ಟ್ ಹ್ಯಾಂಡಲಿಂಗ್ ಸೆಲ್ ಸಂಸ್ಥೆಗೆ ಕಸ ಸಂಗ್ರಹ ಗುತ್ತಿಗೆ ಲಭಿಸಿತು. ಆದರೆ ಮಹಾನಗರ ಪಾಲಿಕೆ ಅಂತಿಮ ಕಾರ್ಯಾದೇಶ ನೀಡದ ಪರಿಣಾಮ, ಸ್ಥಳೀಯ ಗುತ್ತಿಗೆದಾರರೇ ಕಸ ವಿಲೇವಾರಿ ಮಾಡುತ್ತಿದ್ದಾರೆ. ಗುತ್ತಿಗೆ ಲಭಿಸಿದರೂ ಆದೇಶ ನೀಡಲು ಎರಡು ವರ್ಷ ವಿಳಂಬ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ.  
'ಗೊಂದಲಗಳಿಂದಾಗಿ ಕಾರ್ಯಾದೇಶ ನೀಡಲು ವಿಳಂಬವಾಯಿತು. ಎರಡು ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸುವ ಪೈಲಟ್ ಯೋಜನೆ ಮಾಡಿದ್ದೇವೆ. ಇದು ಯಶಸ್ಸು ಕಂಡಿದೆ. ಅಂತೋಣಿ ಸಂಸ್ಥೆಗೆ ಭೇಟಿಯಾಗುವಂತೆ ಸೂಚಿಸಿದ್ದೇವೆ. ಮೇಯರ್ ಜತೆಯೂ ಈ ಬಗ್ಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ಕಸ ಸಂಗ್ರಹಕ್ಕೆ ಕಾರ್ಯಾದೇಶ ನೀಡಲಿದ್ದೇವೆ' ಎನ್ನುತ್ತಾರೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ.
'ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಯೇ ವಿಳಂಬಕ್ಕೆ ಕಾರಣ. ಕಸವನ್ನು ರಸ್ತೆಯಲ್ಲಿ ಅಲ್ಲ, ಅಧಿಕಾರಿಗಳ ಮನೆ ಒಳಗೆ ಎಸೆದರೂ ಸುಮ್ಮನಿರುತ್ತಾರೆ. ತಿಂಗಳಾಂತ್ಯದಲ್ಲಿ ಕಾಮಗಾರಿ ತೃಪ್ತಿಕರವಾಗಿದೆ ಎಂದು ವರದಿ ನೀಡುತ್ತಾರೆ. ಏಕೆಂದರೆ ಗುತ್ತಿಗೆದಾರರು ಅಧಿಕಾರಿಗಳನ್ನು ತೃಪ್ತಿಪಡಿಸಿರುತ್ತಾರೆ' ಎನ್ನುತ್ತಾರೆ ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ ಹನುಮಂತ ಕಾಮತ್.
2013ರ ಡಿ.13 ಜಿಲ್ಲಾ ಉಸ್ತುವಾರಿ ಸಚಿವ ರೈಗಳ ಪರಿಶೀಲನೆ ಸಭೆಯಲ್ಲಿ 'ಎಲ್ಲ ವಾರ್ಡ್‌ಗಳಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಆರಂಭಿಸಲಾಗಿದೆ. ಶೇ.70 ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ' ಎಂದು ಕಾರ್ಪೊರೇಶನ್ ಹೇಳಿತ್ತು. ಆದರೆ ಶೇ. 25 ಕಸ ಸಂಗ್ರಹ ನಡೆಯುತ್ತಿಲ್ಲ.
ತೆರಿಗೆ ಹೆಚ್ಚಳ: ಗುತ್ತಿಗೆದಾರರ ಕೆಲಸಗಾರರು 60 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಬೇಕು. ಒಂದು ಮನೆಯವರು 30 ರೂ. ಸಣ್ಣ ಅಂಗಡಿಯವರು 20, ದೊಡ್ಡ ಅಂಗಡಿಯವರು 50 ರೂ. ಹೋಟೇಲ್ 500 ರೂ ನೀಡಬೇಕು ಎನ್ನುವುದು ಹಳೆ ನಿಯಮ. ಈ ನಡುವೆ ಘನತ್ಯಾಜ್ಯ ಸಂಗ್ರಹ ಹಣವನ್ನು ಮನೆ ಮತ್ತು ವಾಣಿಜ್ಯ ಮಳಿಗೆಗಳಿಗೆ ಚದರಡಿ ಲೆಕ್ಕಾಚಾರದಲ್ಲಿ ಹೆಚ್ಚಿಗೆ ಮಾಡಿ, ವರ್ಷಕ್ಕೆ ಒಮ್ಮೆ ಪಾವತಿಸುವ ವ್ಯವಸ್ಥೆ ಮಾಡಿದ್ದಾರೆ.
ಪ್ರತಿ ದಿನ ಗುಡಿಸುವ ರಸ್ತೆ, 2 ದಿನಕ್ಕೊಮ್ಮೆ ಗುಡಿಸುವ ರಸ್ತೆ, ವಾರಕ್ಕೊಮ್ಮೆ ಗುಡಿಸುವ ರಸ್ತೆ ಎಂದು ವಿಭಜಿಸಲಾಗಿದೆ. ಗುತ್ತಿಗೆದಾರರು ರಸ್ತೆ ಬದಿ ಪೊದೆ, ಕಸ ತೆಗೆಯಬೇಕು. 1 ಮೀಟರ್ ಅಗಲದ ಚರಂಡಿ ಸ್ವಚ್ಛ ಮಾಡಬೇಕು. ಆದರೆ ಯಾರೂ ಮಾಡುತ್ತಿಲ್ಲ. ಕೇಳುವುದೂ ಇಲ್ಲ. ಮನಪಾ ಮಳೆಗಾಲದಲ್ಲಿ 60 ಸ್ಪೆಶಲ್ ಗ್ಯಾಂಗ್ ಮಾಡುತ್ತದೆ. ಈ ಗ್ಯಾಂಗ್‌ಗೆ ತಿಂಗಳಿಗೆ 92,812 ನೀಡುತ್ತಾರೆ. ಮೂರು ತಿಂಗಳಿಗೆ 1.80 ಕೋಟಿ ಹೆಚ್ಚುವರಿ ಖರ್ಚು.
ಗುತ್ತಿಗೆ ಲೆಕ್ಕಾಚಾರದಂತೆ 1ಟಿಪ್ಪರ್ ಲೋಡ್‌ನಲ್ಲಿ 5 ಕ್ಯೂಬಿಕ್ ಮೀಟರ್ ತ್ಯಾಜ್ಯವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಹಾಕುತ್ತಾರೆ. ದಿನಕ್ಕೆ 60 ಲೋಡ್ ನಂತೆ 300 ಕ್ಯೂಬಿಕ್ ಮೀಟರ್ ಘನತ್ಯಾಜ್ಯ. ತಿಂಗಳಿಗೆ 1800 ಕ್ಯೂಬಿಕ್ ಮೀಟರ್ ತ್ಯಾಜ್ಯ ಲೋಡ್ ಮಾಡುತ್ತಾರೆ !
'ಮಹಾನಗರ ಪಾಲಿಕೆ ಎಡಿಬಿ ಸಾಲದಿಂದ ಪಡೆದ 8 ಕಸದ ಕಂಟೇನರ್ ಸಾಗಿಸುವ ಲಾರಿ  ಒದಗಿಸುತ್ತದೆ, ಇದಕ್ಕೆ ಬಾಡಿಗೆ ಗುತ್ತಿಗೆದಾರನೇ ನೀಡಬೇಕು. ಆದರೆ ಇಷ್ಟು ತ್ಯಾಜ್ಯ ಹಾಕಲು ಜಾಗ ಇಲ್ಲ. ಇದು ಕೇವಲ ಅಂದಾಜುಪಟ್ಟಿಯಲ್ಲಿ ಮಾತ್ರ  ಘನತ್ಯಾಜ್ಯ ಲೆಕ್ಕ ತೋರಿಸುತ್ತಾರೆ. ಕಸದ ಹೆಸರಲ್ಲಿ ಅಮೇಧ್ಯವನ್ನು ತಿನ್ನುತ್ತಾರೆ' ಎನ್ನುವುದು ಹನುಮಂತ ಕಾಮತ್ ಆರೋಪ.


ಡಸ್ಟ್ ಬಿನ್ ಕಾಣೆಯಾದರೂ
ಗುತ್ತಿಗೆದಾರರಿಗೆ ಹಣ !


ಶೇ.50ಕ್ಕಿಂತಲೂ ಹೆಚ್ಚು ಡಸ್ಟ್ ಬಿನ್ ತೆಗೆದಾಗಿದೆ. ಡಸ್ಟ್ ಬಿನ್ ಮಾಯವಾದರೂ ಡಸ್ಟ್ ಬಿನ್‌ನಲ್ಲಿ ತುಂಬಿದ ಕಸ ತೆಗೆಯುವ ಪ್ಯಾಕೇಜ್ ಗುತ್ತಿಗೆದಾರನಿಗೆ ತಿಂಗಳಿಗೆ 9 ಲಕ್ಷ ಈಗಲೂ ನೀಡುತ್ತಿದ್ದಾರೆ. ಕಸದಿಂದ ರಸ ಕುಡಿಯಬಹುದು ಎನ್ನುವುದಕ್ಕೆ ತ್ಯಾಜ್ಯ ವಿಲೇವಾರಿ ಜ್ವಲಂತ ನಿದರ್ಶನ. ಜನರ ತೆರಿಗೆ ಹೆಚ್ಚು ಮಾಡುವುದಿಲ್ಲ ಎಂಬ ಕಾಳಜಿ ತೋರಿಸಿ ಇನ್ನೊಂದೆಡೆ ಜನರ ತೆರಿಗೆ ಹಣ ಪೋಲಾಗುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement