ಕಾರ್ಕಳ: ಮನೆ ಗೋಡೆ ಕುಸಿದು ಮಗು ಸಾವು
ಉಡುಪಿ: ಕಾರ್ಕಳ ತಾಲೂಕಿನಲ್ಲಿ ಶನಿವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಅದರೆಡೆಗೆ ಸಿಲುಕಿದ 2 ವರ್ಷದ ಗಂಡು ಮಗು ಮೃತಪಟ್ಟಿದೆ.
ಬಂಗ್ಲೆಗುಡ್ಡೆ ವಾರ್ಡ್ನ ಕಜೆಕ್ರಾಸ್ ಎಂಬಲ್ಲಿ ಶನಿವಾರ ಮುಂಜಾನೆ ಮನೆ ಗೋಡೆ ಕುಸಿದು, ಸಂಜಯ್- ಶ್ರುತಿ ಎಂಬವರ ಮಗು ಸಾಯಿಭುವನ್ (2) ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಮನೆಯೊಳಗೆ ಗೋಡೆಯ ಪಕ್ಕದಲ್ಲಿ ತಾಯಿ ಮತ್ತು ಮಗು ಮಲಗಿದ್ದರು. ಮಧ್ಯರಾತ್ರಿಯ ನಂತರ ಸುಮಾರು 4.45 ಗಂಟೆಗೆ ಮನೆಯ ಗೋಡೆ ಏಕಾಏಕಿ ಮನೆಯೊಳಗೆ ಮಗುವಿನ ಮೇಲೆ ಕುಸಿದು ಬಿತ್ತು. ತಕ್ಷಣ ಮಗವನ್ನು ಹೊರಗೆ ತೆಗೆಯಲಾಯಿತಾದರೂ ಮಗು ಒಳಗೆ ಉಸಿರುಗಟ್ಟಿ ಮೃತಪಟ್ಟಿತ್ತು.
ತಗ್ಗು ಪ್ರದೇಶ ಜಲಾವೃತ: ಶುಕ್ರವಾರ ನಾಗರ ಪಂಚಮಿಗೂ ಅಡ್ಡಿಯಾಗುವಂತೆ ಸುರಿದಿದ್ದ ಭಾರಿ ಮಳೆ ಶನಿವಾರ ಹಗಲಿನಲ್ಲಿ ಹಿಮ್ಮುಖವಾಗಿದೆ. ಶುಕ್ರವಾರ ತಗ್ಗು ಪ್ರದೇಶದಲ್ಲಿ ತುಂಬಿದ್ದ ನೀರು ಕೂಡ ಇಳಿದಿದೆ. ಆದರೆ, ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
ಶನಿವಾರ ಆಗಾಗ್ಗೆ ಮಳೆಯಾಗುತ್ತಿದ್ದು, ಕುಂದಾಪುರ ತಾಲೂಕಿನ ಹಾಲಾಡಿ, ನಾವುಂದ, ನೇರಂಬಲ್ಳಿ, ನಾಡಾ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.
ಉಡುಪಿ ತಾಲೂಕಿನ ಚೇರ್ಕಾಡಿ, ಕುಕ್ಕೆಹಳ್ಳಿ, ಕೋಟ, ಉಪ್ಪೂರು, ತೋನ್ಸೆ ಪ್ರದೇಶಗಳಲ್ಲಿಯೂ ನದಿ ಅಕ್ಕಪಕ್ಕದ ಪ್ರದೇಶಗಳಲ್ಲಿ ನೆರೆಯ ಭೀತಿ ಇನ್ನೂ ಕಡಿಮೆಯಾಗಿಲ್ಲ.
ಶುಕ್ರವಾರದಂತೆ ಶನಿವಾರವೂ ಭಾರಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೆಲವು ಖಾಸಗಿ ಸಂಸ್ಥೆ - ಕಚೇರಿಗಳಲ್ಲಿಯೂ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು.
ಅಪಾರ ಹಾನಿ: ಕುಂದಾಪುರ ತಾಲೂಕಿನ ಅಚ್ಲಾಡಿ ಗ್ರಾಮದ ಮಂಜು ಪೂರಿ ಎಂಬವರ ಮನೆ ಮೇಲೆ ಮರ ಬಿದ್ದು ರು. 17,600, ಮೇಲ್ಖಾರ್ವಿಕೇರಿ ಗ್ರಾಮದ ಸಂಜೀವಿ ಬಾಯಿ ಅವರ ಮನೆಯ ಗೋಡೆ ಬಿದ್ದು ರು. 1.50 ಲಕ್ಷ, ಕಂಡ್ಲೂರು ಗ್ರಾಮದ ಸುಶೀಲ ಶ್ರೀನಿವಾಸ ಅವರ ಮನೆ ಮೇಲೆ ಮರ ಬಿದ್ದು ರು. 8 ಸಾವಿರ, ಹಟ್ಟಿಕುದ್ರು ಗ್ರಾಮದ ಮಂಜಿ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ರು. 20 ಸಾವಿರ ನಷ್ಟವಾಗಿದೆ.
ಇಲ್ಲಿನ ಹಳ್ಳೂರು ಗ್ರಾಮದ ಸೂರಪ್ಪ ಶೆಟ್ಟಿ ಎಂಬವರ ಗದ್ದೆ ಬದಿಯ ಬದು ಕಡಿದು ನೆರೆ ನೀರು ಗದ್ದೆಗೆ ನುಗ್ಗಿ ಬತ್ತದ ಫಸಲು ನಾಶವಾಗಿದೆ. ಅವರಿಗೆ ಸುಮಾರು ರು. 20 ಸಾವಿರ ನಷ್ಟವಾಗಿದೆ ಎಂದು ಗ್ರಾಮ ಕರಣಿಕರು ತಿಳಿಸಿದ್ದಾರೆ.
ಅದೇ ರೀತಿ ಮಳೆ ಗಾಳಿಗೆ ಉಡುಪಿ ತಾಲೂಕಿನ ರಾಜೀವ ನಗರದ ಸುಶೀಲ ಶೆಟ್ಟಿಗಾರ್ ಎಂಬವರ ಮನೆಯ ಮಾಡಿನ ತಗಡು ಶೀಟುಗಳು ಹಾರಿ ಹೋಗಿದ್ದು ರು. 15 ಸಾವಿರ ಮತ್ತು ಹೆಜಮಾಡಿಯ ಸಂಕ್ರಿ ದೇವಾಡಿಗ ಅವರ ಮನೆಯ ಮಾಡು ಕುಸಿದು ರು. 80 ಸಾವಿರ ನಷ್ಟವಾಗಿದೆ.