ಎಂಡೋ ಪುನರ್ವಸತಿ ಕೇಂದ್ರ ಉಡುಪಿ, ಉತ್ತರ ಕನ್ನಡಕ್ಕೆ ವಿಸ್ತರಣೆ: ಖಾದರ್
ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗೆ ದಕ್ಷಿಣ ಕನ್ನಡದ ಮಾದರಿಯಲ್ಲಿ ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಪುನರ್ವಸತಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಡೋ ಸಂತ್ರಸ್ತರ ಪುನರ್ವಸತಿ ಕುರಿತ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದ.ಕ.ಜಿಲ್ಲೆಯಲ್ಲಿ 2,484, ಉಡುಪಿಯಲ್ಲಿ 2,158, ಉತ್ತರ ಕನ್ನಡದಲ್ಲಿ 6,100 ಮಂದಿ ಎಂಡೋ ಸಂತ್ರಸ್ತರನ್ನು ಗುರುತಿಸಲಾಗಿದೆ. ಇವರಿಗೆ ಗುರುತಿನ ಚೀಟಿ ನೀಡುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಕೊಕ್ಕಡ ಮತ್ತು ಕೈಲದಲ್ಲಿ ಎಂಡೋ ಪುನರ್ವಸತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ವೃತ್ತಿ ನೈಪುಣ್ಯ ಮತ್ತು ಮಾರುಕಟ್ಟೆ ಬಗ್ಗೆ ತಿಳುವಳಿಕೆ ನೀಡಲಾಗುವುದು. ಇದೇ ಮಾದರಿ ಕೇಂದ್ರವನ್ನು ಉಡುಪಿ, ಕಾರ್ಕಳ, ಕುಂದಾಪುರ, ಕೋಟಗಳಲ್ಲಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಪುನರ್ವಸತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಮಾರ್ಚ್ನಿಂದ ಖಾತೆಗೆ: ಎಂಡೋ ಸಂತ್ರಸ್ತರ ಬ್ಯಾಂಕ್ ಖಾತೆಗೆ ಮಾರ್ಚ್ನಿಂದ ಹಣ ಜಮೆಯಾಗಲಿದೆ. ಶೇ.40ರಿಂದ ಶೇ.75ರ ವರೆಗೆ ಮಾಸಿಕ ರು. 3 ಸಾವಿರ, ಅದಕ್ಕಿಂತ ಕೆಳಗಿನ ಹಂತದ ವೈಕಲ್ಯ ಇರುವವರಿಗೆ ರು. 2 ಸಾವಿರ ಪಿಂಚಣಿ ಸಿಗಲಿದೆ. ಇದೀಗ ಹೈಕೋರ್ಟ್ ಆದೇಶ ಮೇರೆಗೆ ಶೇ.40ರ ಬದಲು ಶೇ.25 ಅಂಗವಿಕಲತೆ ಇರುವವರನ್ನು ಪರಿಗಣಿಸುತ್ತಿದ್ದು, ಈ ಬಗ್ಗೆ ಸರ್ವೇ ನಡೆಸುವಂತೆ ಸೂಚಿಸಲಾಗಿದೆ ಎಂದರು.
ಎಂಡೋಸಲ್ಫಾನ್ ಸಿಂಪಡಣೆಯಿಂದ ಹಲವು ಮಂದಿ ಬದುಕು ಕಳಕೊಂಡಿದ್ದಾರೆ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕೋರ್ಟ್ ಮೆಟ್ಟಿಲೇರಲಾಗಿದೆ. ಕೇಂದ್ರ ಗೇರು ಅಭಿವೃದ್ಧಿ ನಿಗಮ, ಎಂಡೋಸಲ್ಫಾನ್ ಕಂಪನಿ ಸೇರಿದಂತೆ ಮೂರು ಮಂದಿಯನ್ನು ಪ್ರತಿವಾದಿ ಮಾಡಲಾಗಿದೆ ಎಂದರು.
ರಾಜ್ಯಕ್ಕೆ 50 ಕೋಟಿ ಮಂಜೂರು: ರಾಷ್ಟ್ರೀಯ ನಗರ ಆರೋಗ್ಯ ಮಿಷನ್(ಎನ್ಯುಎಚ್ಎಂ)ಕಾರ್ಯಕ್ರಮದಲ್ಲಿ 5 ವರ್ಷಕ್ಕೆ ರಾಜ್ಯಕ್ಕೆ ರು. 50 ಕೋಟಿ ಕೇಂದ್ರ ಅನುದಾನ ಲಭಿಸಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ಮತ್ತು ಉಳ್ಳಾಲವನ್ನು ಸೇರಿಸಲಾಗಿದೆ. ಪ್ರಥಮ ಹಂತದಲ್ಲಿ ಮಂಗಳೂರಿಗೆ ರು. 3.60 ಲಕ್ಷ ಹಾಗೂ ಉಳ್ಳಾಲಕ್ಕೆ ರು. 43.15 ಲಕ್ಷ ಬಿಡುಗಡೆಯಾಗಿದೆ. ಉಳ್ಳಾಲದಲ್ಲಿ ಮೊದಲ ಬಾರಿಗೆ ಹೆಲ್ತ್ ಬೂತ್ ಕಿಯೊಸ್ಕ್ನ್ನು ಸ್ಥಾಪಿಸಲಾಗುವುದು. ಸ್ಲಂ ಪ್ರದೇಶದಲ್ಲಿ ಎಲ್ಲ ವಿವಿಧದ ಆರೋಗ್ಯ ಸೇವೆ ಜನತೆಗೆ ಸಿಗಲಿದೆ ಎಂದರು.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ಗೋಪಾಲ್, ಆಯುಕ್ತ ವಿ.ಬಿ.ಪಾಟೀಲ್ ಇದ್ದರು.
ಮಾತು ಬದಲಿಸಿದ ಕಾರ್ಯದರ್ಶಿ
ಗರ್ಭಿಣಿಯರ ಸ್ಕ್ಯಾನಿಂಗ್ಗೆ ಎನ್ಜಿಒ ಸಂಸ್ಥೆಗೆ ಈ ಹಿಂದೆ ಅವಕಾಶ ನೀಡದ್ದನ್ನು ಪತ್ರಕರ್ತರು ಪ್ರಶ್ನಿಸಿದಾಗ, ಇದರಿಂದ ಭ್ರೂಣಹತ್ಯೆ ನಡೆಯುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ಗೋಪಾಲ್ ಹೇಳಿದರು.
ಜಿಲ್ಲೆಯಲ್ಲಿ ಎಷ್ಟು ಭ್ರೂಣಹತ್ಯೆ ನಡೆದಿದೆ ಎಂದು ಮಾಧ್ಯಮದವರು ಸ್ಪಷ್ಟೀಕರಣ ಬಯಸಿದರು. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವ ಕುಮಾರ್, ಕಳೆದ 6 ವರ್ಷದಿಂದ ಯಾವುದೇ ಭ್ರೂಣ ಹತ್ಯೆ ಪ್ರಕರಣ ವರದಿಯಾಗಿಲ್ಲ ಎಂದರು.
ಇದರಿಂದ ಮಾತು ಬದಲಿಸಿದ ಮದನ್ಗೋಪಾಲ್, ಭ್ರೂಣ ಹತ್ಯೆಯಂಥ ದುರ್ಬಳಕೆಗೆ ಸ್ಕ್ಯಾನಿಂಗ್ ಬಳಕೆಯಾಗುತ್ತದೆ ಎಂದು ಸಮಜಾಯಿಸಿ ನೀಡಿದರು. ಮಧ್ಯೆಪ್ರವೇಶಿಸಿದ ಸಚಿವ ಖಾದರ್, ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದರೆ ಎನ್ಜಿಎಗಳಿಗೆ ಸ್ಕ್ಯಾನಿಂಗ್ ಮಾಡಲು ನಿರಾಕರಿಸುವುದಿಲ್ಲ. ಪ್ರಸ್ತುತ ಕ್ಷೇಮ ಆಸ್ಪತ್ರೆಗೆ ಸ್ಕ್ಯಾನಿಂಗ್ ನಡೆಸಲು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.