'ಕಲೆಯಿಂದ ಸಿಗುವ ಆನಂದ ವಿಜ್ಞಾನದಿಂದ ಸಿಗುವುದಿಲ್ಲ'
ಉಡುಪಿ: ಕಲೆಯಿಂದ ಮಾತ್ರವೇ ಆನಂದ ಸಿಗುತ್ತದೆ, ವಿಜ್ಞಾನದಿಂದ ಆನಂದ ಸಿಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಗಾಯಕ, ಪದ್ಮಭೂಷಣ ಆರ್.ಕೆ. ಶ್ರೀಕಂಠನ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಎಂಜಿಎಂ ಕಾಲೇಜಿನಲ್ಲಿ ಉಡುಪಿಯ ರಾಗಧನ ಸಂಸ್ಥೆ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿಗಳ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಈಗೀಗ ವಿದ್ಯೆ ಕಲಿಯುವುದಕ್ಕೆ ಶ್ರಮ ಪಡಬೇಕಾಗಿಲ್ಲ. ವಿಜ್ಞಾನದಿಂದಾಗಿ ಎಲ್ಲವೂ ಸುಲಭವಾಗಿ ಬಿಟ್ಟಿದೆ. ಆದರೆ, ಕಲೆಯನ್ನು ಕರಗತ ಮಾಡಿಕೊಳ್ಳುವುದಕ್ಕೆ ಶ್ರಮಪಡಲೇಬೇಕು. ಶ್ರಮವಿಲ್ಲದೆ ವಿಜ್ಞಾನದಿಂದ ಕಲೆ ಸಿದ್ಧಿಸುವುದಿಲ್ಲ ಶ್ರೀಕಂಠನ್ ಹೇಳಿದರು.
ಮೋಕ್ಷಪ್ರದವಾದ ಸಂಗೀತ ಕೃತಿಗಳನ್ನು ಬಿಟ್ಟು ಹೋಗಿರುವ ಕನಕದಾಸ, ಪುರಂದರದಾಸ, ತ್ಯಾಗರಾಜರಂತಹ ಮಹಾನುಭಾವರನ್ನು ಇಂದಿನ ಸಂಗೀತಕಾರರೂ ಮರೆಯುತ್ತಿದ್ದಾರೆ. ಈ ಮಹಾನುಭಾವ ಸಂಗೀತಕಾರರ ಕೃತಿಗಳನ್ನು ಹಾಡಿದ್ದಕ್ಕೆ ನನ್ನಂಥವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ. ಆದರೆ, ಅವರಿಗೆ ಯಾವುದೇ ಪ್ರಶಸ್ತಿಗಳು, ಸನ್ಮಾನಗಳು ಸಿಕ್ಕಿಲ್ಲ. ಅವರನ್ನು ಮರೆಯದೆ ಅವರ ಕೃತಿಗಳನ್ನು ತಪ್ಪಿಲ್ಲದೆ ಶ್ರದ್ಧೆ ಮತ್ತು ಭಕ್ತಿಯಿಂದ ಹಾಡುವುದೇ ಅವರಿಗೆ ನೀಡುವ ನಿಜವಾದ ಗೌರವ, ಪ್ರಶಸ್ತಿಗಳಾಗಿವೆ ಎಂದು ಅವರು ಉದಯೋನ್ಮುಖ ಸಂಗೀತಕಾರರಿಗೆ ಕಿವಿ ಮಾತು ಹೇಳಿದರು.
ಜೊತೆಗೆ ಸಂಗೀತ ಅವಸರದ ಅಡುಗೆಯಾಗುತ್ತಿದೆ. ಪೂರ್ತಿ ಸಂಗೀತವನ್ನು ಕರಗತ ಮಾಡಿಕೊಳ್ಳದೆ ವೇದಿಕೆ ಹತ್ತಬಾರದು. ಪ್ರದರ್ಶನ ನೀಡಬಾರದು. ಸಿ.ಡಿ.ಗಳನ್ನು ತಯಾರಿಸಬಾರದು. ಇದರಿಂದ ಕಲೆ ಅರ್ಧದಲ್ಲಿಯೇ ವಿಮುಖವಾಗುತ್ತದೆ. ಇದರಿಂದ ಕಲೆಗೆ ಅಪಚಾರನಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಹಾಲಾ ನಾಯ್ಕ್, ಪ್ರತಿಯೊಬ್ಬರ ದೈಹಿಕ- ಮಾನಸಿಕ ಬೆಳವಣಿಗೆಗೆ 10ನೇ ತರಗತಿವರೆಗೆ ಸಂಗೀತ ಮತ್ತು ನೃತ್ಯ ಕಲೆಗಳ ಅಭ್ಯಾಸ ಕಡ್ಡಾಯಗೊಳಿಸಬೇಕು. ಇದರಿಂದ ಉತ್ತಮ ಕಲಾರಸಿಕರೂ ಹೆಚ್ಚುತ್ತಾರೆ. ಕಲೆಗಳೂ ಉಳಿಯುತ್ತವೆ ಎಂದರು.
ಇತಿಹಾಸತಜ್ಞ ಡಾ. ಸುರೇಂದ್ರ ರಾವ್, ಡಿ.ಟಿ. ಫೌಂಡೇಶನ್ ಸ್ಥಾಪಕ ಡಾ. ರವಿಚಂದ್ರನ್ ಆಶಯ ಭಾಷಣ ಮಾಡಿದರು.
ಸಂಗೀತ ಸಂಘಟಕ ಪಿ. ನಿತ್ಯಾನಂದ ರಾವ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಗಧನ ಅಧ್ಯಕ್ಷ ಎ. ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ. ಅರವಿಂದ ಹೆಬ್ಬಾರ್ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ವಂದಿಸಿದರು.
ಇದೇ ಸಂದರ್ಭ ಪದ್ಮಭೂಷಣ ಆರ್.ಕೆ. ಶ್ರೀಕಂಠನ್ ಅವರನ್ನು ಸನ್ಮಾನಿಸಲಾಯಿತು. ಉದಯೋನ್ಮುಖ ಕಲಾವಿದೆಯರಾದ ಅರ್ಚನ, ಸಮನ್ವಿ ಮತ್ತು ಗಾರ್ಗಿ ಶಬರಾಯ ಅವರ ಗಾಯನ ಸಿ.ಡಿ.ಗಳನ್ನು ಶ್ರೀಕಂಠನ್ ಬಿಡುಗಡೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಶ್ರೀರಂಠನ್ ಅವರ ಸಂಗೀತ ಕಛೇರಿ ನಡೆಯಿತು.