ದುಡಿ, ನುಡಿ ಮೂಲಕ ಸಂಸ್ಕೃತಿ ಉಳಿಸಿಕೊಂಡ ಮೊಗೇರರು: ನಳಿನ್
ಪುತ್ತೂರು: ಶ್ರಮ ಮತ್ತು ಕರ್ಮದ ಸಂಕೇತವಾಗಿರುವ ದುಡಿ ಮತ್ತು ನುಡಿಯ ಮೂಲಕ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವ ಮೊಗೇರ ಜನಾಂಗವು ನಿಷ್ಠೆಯಿಂದ ಬದುಕಿ ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವ ಸಮಾಜವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕರ್ನಾಟಕ ಮತ್ತು ಕೇರಳ ರಾಜ್ಯದ ಸಮಸ್ತ ಮೊಗೇರ ಸಂಘದ ಸಮ್ಮಿಲನದಲ್ಲಿ ದ.ಕ. ಜಿಲ್ಲಾ ಮೊಗೇರ ಸಂಘ, ಪುತ್ತೂರು ತಾಲೂಕು ಮೊಗೇರ ಸಂಘ, ಮಹಿಳಾ ಸಂಘ, ಯುವ ವೇದಿಕೆ ಮತ್ತು ಬಂಟ್ವಾಳ ತಾಲೂಕು ಮೊಗೇರ ಸಂಘದ ಜಂಟಿ ಆಶ್ರಯದಲ್ಲಿ ಭಾನುವಾರ ಇಲ್ಲಿನ ಪುರಭವನದಲ್ಲಿ ಮೊಗೇರ ಸಮುದಾಯದ ಮೊದಲ ಪತ್ರಿಕೆ ಮನ್ವಂತರದ ಮಾರ್ದನಿ 'ನಮ್ಮ ಧ್ವನಿ' ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಕಠಿಣ ನೋವು ಅನುಭವಿಸಿರುವ ಮೊಗೇರ ಜನಾಂಗವು ಶಿಕ್ಷಣ ಪಡೆಯುವುದರೊಂದಿಗೆ ಎದ್ದು ನಿಲ್ಲಬೇಕಾಗಿದೆ. ಪರಸ್ಪರ ಒಗ್ಗಟ್ಟು ಮತ್ತು ಮಾರ್ಗದರ್ಶನದ ಮೂಲಕ ಸ್ವಾಭಿಮಾನಿಗಳಾಗಿ ಬೆಳೆಯಬೇಕಾಗಿದೆ. ಎಲ್ಲದಕ್ಕೂ ಸರ್ಕಾರಕ್ಕೆ ಕೈಚಾಚುವ ಬದಲು ಉಳ್ಳವರು ಇಲ್ಲದವರನ್ನು ಮೇಲೆತ್ತುವ ಮೂಲಕ ಸಮಾಜದಲ್ಲಿ ಪರಿವರ್ತನೆ ಮಾಡುವ ಕೆಲಸವಾಗಬೇಕು ಎಂದರು.
ನಂತರ ಜನಪದ ಪಾಡ್ದನ ಕಲಾವಿದೆ ಗಿಡಿಗೆರೆ ರಾಮಕ್ಕ ಅವರನ್ನು ಗೌರವಿಸಿದರು.
ವೆಬ್‌ಸೈಟ್ ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಮೊಗೇರ ಜನಾಂಗದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದ್ದು, ಈ ಬಗ್ಗೆ ಸಮಗ್ರ ಆಧ್ಯಯನ ನಡೆಯಬೇಕು ಎಂದರು.
ರಾಜ್ಯ ಮೊಗೇರ ಸಂಘದ ಗೌರವ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಸುಂದರ ಮೇರ ಹೊಸಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಜನಪದ ಪಾಡ್ದನ ಕಲಾವಿದೆ ಗಿಡಿಗೆರೆ ರಾಮಕ್ಕ 'ನಮ್ಮ ಧ್ವನಿ' ಪತ್ರಿಕೆ ಅನಾವರಣಗೊಳಿಸಿದರು. ಸಾಹಿತಿ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ದಿಕ್ಸೂಚಿ ಭಾಷಣ ಮಾಡಿದರು.
ಕೊಡಗು ಜಿ.ಪಂ. ಅಧ್ಯಕ್ಷ ಶಿವಪ್ಪ, ರಾಜ್ಯ ಮೊಗೇರ ಸಂಘದ ಗೌರವ ಅಧ್ಯಕ್ಷ ಕೃಷ್ಣಪ್ಪ ದೇರೆಬೈಲ್, ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಗೌರವ ಅಧ್ಯಕ್ಷ ರಾಮಪ್ಪ ಮಂಜೇಶ್ವರ, ಅಧ್ಯಕ್ಷ ಹರಿರಾಮ್ ಕೂಳೂರು, ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿ ಅಧ್ಯಕ್ಷೆ ಗಿರಿಜಾ ತಾರಾನಾಥ ಕುಂಬ್ಳೆ, ನಮ್ಮ ಧ್ವನಿ ಪತ್ರಿಕೆ ಪ್ರಧಾನ ಸಂಪಾದಕ ಉದಯ ಸಾರಂಗ್, ರಾಜ್ಯ ಮೊಗೇರ ಸಂಘದ ಗೌರವ ಕಾರ್ಯದರ್ಶಿ ಸೀತಾರಾಮ ಕೊಂಚಾಡಿ, ಕೊಡಗು ಜಿಲ್ಲಾ ಮೊಗೇರ ಸಂಘ ಅಧ್ಯಕ್ಷ ರವಿ ಪಿ.ಎಂ, ಹಾಸನ ಜಿಲ್ಲಾ ಮೊಗೇರ ಸಂಘ ಅಧ್ಯಕ್ಷ ಅಣ್ಣಪ್ಪ ಬಾಳುಪೇಟೆ ಇದ್ದರು.
ಬೊಳಿಕೆ ಜಾನಪದ ಕಲಾ ತಂಡ ಕನ್ನೆಪ್ಪಾಡಿ ಕಾಸರಗೋಡು ಅವರಿಂದ ಜಾನಪದ ಸೌರಭ ಕಾರ್ಯಕ್ರಮ ನಡೆಯಿತು. ವೆಂಕಟೇಶ್ ವಿಟ್ಲ ಸ್ವಾಗತಿಸಿದರು.
ಶಿವಪ್ರಸಾದ್ ಕೆ.ವಿ. ವಂದಿಸಿದರು. ಎಂ.ಕೆ. ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು.