ಬಸ್ ಮಾರ್ಗ ಬದಲಾವಣೆ: ವಿಭಾಗೀಯ ನಿಯಂತ್ರಣಾಧಿಕಾರಿಗೆ ಶೋಕಾಸ್ ನೋಟಿಸ್
ಬಂಟ್ವಾಳ: ಇಲಾಖೆ ಆದೇಶವಿದ್ದರೂ ಪಾಣೆಮಂಗಳೂರು ಪೇಟೆ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಿ ಸರ್ಕಾರಿ ಬಸ್ಗಳು ಪ್ರಯಾಣಿಸುತ್ತಿರುವ ಬಗ್ಗೆ ಸಾರ್ವಜನಿಕ ದೂರಿಗೆ ಸ್ಪಂದಿಸಿದ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಹಾಗೂ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಗ್ರಾಮೀಣ ಪರವಾನಗಿ ಪಡೆದಿರುವ ನಿಗದಿತ ನಿಲುಗಡೆಯ ವಿಟ್ಲ, ಸಾಲೆತ್ತೂರು, ಅಳಕೆ ಹಾಗೂ ಚೇಳೂರು ಸರ್ಕಾರಿ ಬಸ್ಗಳು ಪಾಣೆಮಂಗಳೂರು ಪೇಟೆ ಪ್ರವೇಶಿಸಿ ಸಂಚರಿಸುವಂತೆ ಇಲ್ಲಿನ ಪೌರಸಮಿತಿಯ ಆಗ್ರಹದಂತೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಇಲಾಖೆ ಆದೇಶ ಧಿಕ್ಕರಿಸಿ ಸರ್ಕಾರಿ ಬಸ್ಗಳ ಚಾಲಕ- ನಿರ್ವಾಹಕರು ಹೆದ್ದಾರಿಯನ್ನೇ ಬಳಸಿ ಸಂಚರಿಸುತ್ತಿದ್ದು, ಪ್ರಯಾಣಿಕರೊಂದಿಗೆ ಉಡಾಫೆಯ ವರ್ತಿಸುತ್ತಿದ್ದರು. ಈ ಬಗ್ಗೆ ಪಾಣೆಮಂಗಳೂರು ಪೌರ ಸಮಿತಿ ಸಂಚಾಲಕ ಯು. ಮುಸ್ತಫಾ ಅವರು ಜ.16ರಂದು ಬೆಂಗಳೂರಿನ ಸಾರಿಗೆ ಭವನದಲ್ಲಿರುವ ಕರಾರಸಾ ನಿಗಮದ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ಬಗ್ಗೆ 'ಕನ್ನಡಪ್ರಭ' ಜ.15ರಂದು ವರದಿ ಪ್ರಕಟಿಸಿತ್ತು. ಪೌರ ಸಮಿತಿಯ ದೂರಿಗೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು, ನಿಗಮದ ಮಂಗಳೂರು ಹಾಗೂ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಫೆ.20ರೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.