ಮದ್ಯದ ಅಮಲಲ್ಲಿ ಪ್ರಪಾತಕ್ಕೆ ಬಿದ್ದು ಸಾವು
ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ನಾಗೇಶ್ (45) ಎಂಬವರು ಮದ್ಯದ ಅಮಲಿನಲ್ಲಿ ಮನೆ ಬಳಿಯ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಅವರ ಮನೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಟಾರ್ಪಾಲು ಹಾಕಿದ ಗುಡಿಸಲಿನಲ್ಲಿ ವಾಸವಾಗಿದ್ದರು. ಗುಡಿಸಲು ಗುಡ್ಡವೊಂದರ ತುದಿಯಲ್ಲಿದ್ದು, ಕೆಳಗಡೆ 20 ಅಡಿ ಆಳದ ಕಂದಕವಿತ್ತು. ಕುಡಿತದ ಮತ್ತಿನಲ್ಲಿ ಮನೆಗೆ ಬಂದಿದ್ದ ನಾಗೇಶ್ ಗುಡಿಸಲಿನ ಟಾರ್ಪಾಲು ಮೇಲೆ ಬಿದ್ದಿದ್ದರು ಎನ್ನಲಾಗಿದೆ. ಈ ಸಂದರ್ಭ ಟರ್ಪಾಲು ದರಿದು ನಾಗೇಶ್ ಆಳದ ಕಂದಕಕ್ಕೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯ ಪಡೆದು ಸ್ಥಳದಲ್ಲೇ ಸಾವನ್ನಪಿದ್ದಾರೆ. ಮೃತ ಶೀನ ಇಬ್ಬರು ಪತ್ನಿಯರನ್ನು ಹೊಂದಿದ್ದು, ತನ್ನ ಪತಿಯನ್ನು ಕೊಲೆಗೈಯಲಾಗಿದೆ ಎಂದು ಮೊದಲ ಪತ್ನಿ ಆರೋಪಿಸಿದ್ದರಾದರೂ ಬಳಿಕ ವಾಸ್ತವ ಅರಿತು ಶವ ಸಂಸ್ಕಾರಕ್ಕೆ ಸಹಕರಿಸಿದರು ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.