ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮುಂಗಡ ಹಣ ಪಡೆದು ಕೆಲಸ ನಿರ್ವಹಿಸದ ಕಾರ್ಮಿಕರು ಪೊಲೀಸ್ ವಶಕ್ಕೆ

Lingaraj Badiger
Updated On : 3 Feb 2014, 11:35 am

ಉಪ್ಪಿನಂಗಡಿ: ಬ್ರಿಕ್ಸ್ ತಯಾರಿಕಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿ ಮುಂಗಡ ಹಣವನ್ನು ಪಡೆದು, ಬಳಿಕ ಬೇರೆಡೆಗೆ ಕೆಲಸಕ್ಕೆ ಹೋಗಲು ಮುಂದಾದ ಮೂವರು ರಾಜಸ್ತಾನಿ ಕಾರ್ಮಿಕರನ್ನು ಮುಂಗಡ ಹಣ ನೀಡಿದಾತ ಪೊಲೀಸರಿಗೊಪ್ಪಿಸಿದ ಘಟನೆ ಭಾನುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪೆರ್ನೆ ಬಳಿಯ ಬ್ರಿಕ್ಸ್ ಸಿಮೆಂಟ್ ಬ್ಲಾಕ್ (ಇಟ್ಟಿಗೆ) ತಯಾರಿಕಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಕಾರ್ಮಿಕರು, ಕರ್ತವ್ಯ ನಿರ್ವಹಿಸಲು ಮುಂಗಡ ಹಣವನ್ನು ಮಾಲೀಕನಿಂದ ಪಡೆದುಕೊಂಡಿದ್ದರೂ, ಬೇರೊಂದು ಘಟಕದ ಮಾಲೀಕ ಕರೆದನೆಂದು ಕೆಲಸ ಬಿಟ್ಟು, ಮುಂಗಡ ಹಣವನ್ನೂ ಹಿಂತಿರುಗಿಸದೆ ಹೊರಟಿದ್ದರು. ಮಾಹಿತಿ ಪಡೆದ ಘಟಕದ ಮಾಲೀಕ ಕಾರ್ಮಿಕರನ್ನು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿ, ಕಾರ್ಮಿಕರ ವಂಚನೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು. ಮುಂಗಡ ಪಡೆದಿರುವ ಕಾರಣ ನಿಷ್ಠೆಯಿಂದ ನಿಗದಿತ ಕರ್ತವ್ಯ ನಿರ್ವಹಿಸಿ ಬಳಿಕ ತೆರಳಿ ಎಂದು ಎಚ್ಚರಿಕೆ ನೀಡಿ ಅವರು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ರಿಕ್ಷಾ ಚಾಲಕನ ಮನೆಗೆ ನುಗ್ಗಿ ಹಲ್ಲೆ, ದಾಂದಲೆ
ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ತಂಡವೊಂದು ರಿಕ್ಷಾ ಚಾಲಕನ ಮನೆಗೆ ನುಗ್ಗಿ ಮನೆಮಂದಿಗೆ ಹಲ್ಲೆಗೈದು ದಾಂದಲೆ ನಡೆಸಿದ ಘಟನೆ ಕಲ್ಲಡ್ಕ ಸಮೀಪದ ಅಮ್ಟೂರು ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಕಿರಣ್ ಕುಮಾರ್ ಎಂಬವರು ಈ ಬಗ್ಗೆ ಬಂಟ್ವಾಳ ನಗರ ಪೊಲೀಸರಿಗೆ ಅಮ್ಟೂರು ನಿವಾಸಿಗಳಾದ ಕುಂಞಮೋನು, ಸತ್ತಾರ್, ಫವಾಝ್ ಕರಿಂಗಾಣ, ಕಬೀರ್, ಅಶ್ರಫ್ ಎಂಬವರು ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಆಟೋ ರಿಕ್ಷಾದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುವ ಕಿರಣ್ ಗುರುವಾರ ರಾತ್ರಿ ಕೆಲಸ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಿರಣ್ ಮನೆಯಂಗಳದಲ್ಲಿ ರಿಕ್ಷಾ ನಿಲ್ಲಿಸಿ ಮನೆಯೊಳಗೆ ಹೋಗುತ್ತಿದ್ದಂತೆಯೇ ಹಿಂಬಾಲಿಸಿಕೊಂಡು ಮನೆಯೊಳಗೆ ನುಗ್ಗಿದ ಆರೋಪಿಗಳು ಕಿರಣ್ ತಾಯಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಿರಣ್ ಮೇಲೆಯೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ತಾಯಿ ಬೊಬ್ಬೆ ಹಾಕಿದಾಗ ಅಲ್ಲಿಂದ ಓಡಿ ಹೋದ ಆರೋಪಿಗಳು, ಅಂಗಳದಲ್ಲಿ ನಿಲ್ಲಿಸಿದ ರಿಕ್ಷಾಕ್ಕೆ ಹಾನಿ ಮಾಡಿದ್ದಾರೆ. ಆವರಣ ಗೋಡೆಯನ್ನೂ ಕೆಡಹುವ ಪ್ರಯತ್ನ ನಡೆಸಿದ್ದಾರೆ. ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು, ಆರೋಪಿಗಳು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಕಿರಣ್ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕಿರಣ್ ಹಾಗೂ ಕಿರಣ್‌ನ ತಾಯಿ ಬಂಟ್ವಾಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಬಂಟ್ವಾಳ ನಗರ ಪೊಲೀಸರು ದೂರು ಸ್ವೀಕರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement