ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶ್ರೀಲಂಕಾ ನಿರಾಶ್ರಿತರಿಗೆ ಜಾತಿ ಪ್ರಮಾಣ ಪತ್ರಕ್ಕೆ ವಿರೋಧ

Lingaraj Badiger
Updated On : 3 Feb 2014, 11:38 am

ಮಂಗಳೂರು: ಜಿಲ್ಲೆಯಲ್ಲಿ ವಾಸಿಸುತ್ತಿರುವ ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ದಲಿತರು ವಿರೋಧ ವ್ಯಕ್ತಪಡಿಸಿದ್ದಾರೆ.

ದ.ಕ.ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಭಾನುವಾರ ನಡೆದ ಎಸ್‌ಸಿ ಎಸ್‌ಟಿ ಸಭೆಯಲ್ಲಿ ದಲಿತರು ಈ ಪ್ರಸ್ತಾಪ ರೋಧಿಸಿದರು. ಜಿಲ್ಲಾ ಎಸ್ಪಿ ಶಂತನು ಸಿನ್ಹ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕೇಂದ್ರ ಸರ್ಕಾರದ ನಿರ್ದೇಶನ ಪ್ರಕಾರ ವಲಸಿಗರಿಗೆ ಎಸ್‌ಸಿ ಎಸ್‌ಟಿ ಪ್ರಮಾಣ ಪತ್ರ ನೀಡುವಂತಿಲ್ಲ. ರಾಜಕೀಯ ಲಾಭಕ್ಕಾಗಿ ಸರ್ಕಾರ ಜಾತಿ ಪ್ರಮಾಣಪತ್ರ ನೀಡಲು ಮುಂದಾಗಿರುವುದು ಸರಿಯಲ್ಲ. ಇದರಿಂದ ದಲಿತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಚ್.ಭಾಸ್ಕರ ಹಾಗೂ ನಿರ್ಮಲ ಹೇಳಿದರು.
ಇಂದು ವಿವಿಯಲ್ಲಿ ಪ್ರತಿಭಟನೆ: ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸಲು ನ್ಯಾಯಾಲಯ ಮತ್ತು ಸರ್ಕಾರದ ಸ್ಪಷ್ಟ ಆದೇಶವಿದೆ. ಹೀಗಿದ್ದೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ಮಂದಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ದಲಿತರ ಸೌಲಭ್ಯ ಕಸಿಯುತ್ತಿದ್ದಾರೆ. ಉಪಕುಲಪತಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಸೋಮವಾರ ವಿ.ವಿ. ಆವರಣದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತಿದೆ ಎಂದು ದಲಿತ ಮುಖಂಡ ನಾರಾಯಣ ಶಿರೂರು ಹೇಳಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ವಿಚಾರ ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಎಸ್ಪಿ ಶಿವಕುಮಾರ್ ಹೇಳಿದರು.
ಕೆಲವು ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸುವಾಗ ದೂರುದಾರರ ಸಹಿ ಪಡೆದುಕೊಳ್ಳುವುದಿಲ್ಲ. ಇದರಿಂದ ದೂರು ತಿರುಚುವ ಸಾಧ್ಯತೆ ಇದೆ. ಕಡ್ಡಾಯವಾಗಿ ಸಹಿ ಪಡೆದು ಹಿಂಬರಹ ನೀಡಬೇಕು. ಪೊಲೀಸ್ ಠಾಣೆಯಲ್ಲಿರುವಾಗ ಸಮವಸ್ತ್ರ ಮತ್ತು ನಾಮಫಲಕ ಧರಿಸಬೇಕು. ಠಾಣೆಗೆ ನಾಗರಿಕರು ಹೋದಾಗ ಸ್ಪಂದಿಸಬೇಕು. ಹಿರಿಯ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದು ದಲಿತ ಮುಖಂಡ ಎಂ.ಎ.ನಾಯ್ಕ ಆಗ್ರಹಿಸಿದರು.
ಪೊಲೀಸ್ ನೇಮಕ ಮಾಹಿತಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ. ಹಳ್ಳಿಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಆದ್ದರಿಂದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement