ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೋಡಿಂಬಾಡಿಯಲ್ಲಿ ಮರು ಸರ್ವೇ ಕಾರ್ಯ

Mainashree
Updated On : 4 Feb 2014, 10:27 am

ಪುತ್ತೂರು: ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದಲ್ಲಿ ನಡೆಯುತ್ತಿರುವ ಮರು ಭೂ ಮಾಪನಾ ಯೋಜನೆಯ ಕಾರ್ಯ ಚಟುವಟಿಕೆಗಳನ್ನು  ಭೂ ಮಾಪನಾ ಇಲಾಖೆ ರಾಜ್ಯ ಆಯುಕ್ತ ವಿ. ಪೊನ್ನುರಾಜ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕುರಿತು ಕಂದಾಯ ಇಲಾಖೆ ಮತ್ತು ಭೂ ಮಾಪನಾ ಇಲಾಖೆ ಅಧಿಕಾರಿಗಳಿಗೆ ಅವರು ಈ ಸಂದರ್ಭ ನಿರ್ದೇಶನ ನೀಡಿದರು.
ಸ್ಥಳೀಯರೊಂದಿಗೆ ಚರ್ಚೆ: ಈ ಸಂದರ್ಭ ಮರು ಭೂ ಮಾಪನಾ ಯೋಜನೆಯ ಸಾಧಕ- ಬಾಧಕಗಳ ಕುರಿತು ಸ್ಥಳೀಯರೊಂದಿಗೆ ಚರ್ಚೆ ನಡೆಸಿದ ಪೊನ್ನುರಾಜ್, ಈ ಯೋಜನೆಯಿಂದ ಜನರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಯೋಜನೆ ಜಾರಿಯಾದರೆ ಜನತೆಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದರು.
ಕೋಡಿಂಬಾಡಿ ಗ್ರಾಮದ ಸರ್ವೇ ನಂಬ್ರ 23 ಮತ್ತು 24ರಲ್ಲಿ ಮರು ಸಮೀಕ್ಷೆ ವೀಕ್ಷಿಸಿದ ಪೊನ್ನುರಾಜ್, ಈ ಯೋಜನೆಯನ್ನು ಜಾರಿಗೆ ತಂದಿರುವ ಮೂಲ ಉದ್ದೇಶದ ಮಾಹಿತಿ ನೀಡಿ, ಕೋಡಿಂಬಾಡಿಯಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿರುವ ಈ ಯೋಜನೆಯನ್ನು ಮುಂದೆ ರಾಜ್ಯಾದ್ಯಂತ ನಡೆಸಲಾಗುವುದು ಎಂದು ತಿಳಿಸಿದರು.
ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರುಭೂಪನಾ ಯೋಜನೆಯಲ್ಲಿ ಗಡಿ ಗುರುತಿಸುವ ಕಾರ್ಯ ಈಗಾಗಲೇ ಶೇ.90ರಷ್ಟು ಮುಗಿದಿದೆ, ಹಿಸ್ಸಾದಾರರ ಭೂಮಿಯ ವಿಭಜನೆ ಕಾರ್ಯ ಫೆಬ್ರವರಿ 2ನೇ ವಾರದೊಳಗೆ ಮುಕ್ತಾಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮರು ಸರ್ವೇ ಯೋಜನೆ ವ್ಯವಸ್ಥಾಪಕರಾಗಿರುವ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಎಂ.ಟಿ. ಕುಳ್ಳೇಗೌಡ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕ ಕುಸುಮಾಧರ ಬಿ.ಕೆ., ಭೂ ದಾಖಲೆಗಳ ಪುತ್ತೂರಿನ ಸಹಾಯಕ ನಿರ್ದೇಶಕ ಮಂಜುನಾಥ ಎ.ಎಸ್., ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಮಂಜುನಾಥ ರೈ, ಕೋಡಿಂಬಾಡಿ ಗ್ರಾಮಕರಣಿಕ ಚಂದ್ರನಾಯ್ಕ್, ಗ್ರಾ.ಪಂ. ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎನ್. ಸುಭಾಶ್ ನಾಯಕ್ ನೆಕ್ಕರಾಜೆ ಮತ್ತು ಗ್ರಾ.ಪಂ. ಮಾಜಿ ಸದಸ್ಯ ವಸಂತ ಕುಮಾರ್ ಕೋಡಿ ಇದ್ದರು.
ಮರು ಸರ್ವೇ ಪ್ರಯೋಜನಗಳು
ಭೂಮಿಯ ದಾಖಲೆಗಳಿಲ್ಲದ ಕುಟುಂಬಗಳಿಗೆ ಹೊಸ ಸರ್ವೇ ಮೂಲಕ ಅಧಿಕೃತ ದಾಖಲೆಗಳು ದೊರೆಯಲಿವೆ. ಅತಿಕ್ರಮಣವಾಗಿರುವ ಸರ್ಕಾರಿ ಸ್ಥಳ ಮತ್ತು ಗೋಮಾಳಗಳ ಮಾಹಿತಿಯೂ ಬಹಿರಂಗವಾಗುತ್ತದೆ. ಜನರಿಗೆ ತಾವು ಹೊಂದಿರುವ ಜಮೀನಿನ ಸಮರ್ಪಕ ಮಾಹಿತಿ ಹಾಗೂ ನೈಜ ಲೆಕ್ಕ ದೊರೆಯದ ಹಿನ್ನೆಲೆಯಲ್ಲಿ ಹೊಸದಾಗಿ ಸರ್ವೇ ಕಾರ್ಯ ನಡೆಸಲು ಸರ್ಕಾರ ಯೋಜನೆ ಸಿದ್ಧಪಡಿಸಿದೆ. ಜಮೀನಿನ ಆರ್‌ಟಿಸಿಯ ಬಹಳಷ್ಟು ಸಮಸ್ಯೆಗಳಿಗೆ ಈ ಸರ್ವೇ ಕಾರ್ಯ ಪರಿಹಾರ ಒದಗಿಸಲಿದೆ. ಜಂಟಿ ವ್ಯವಸ್ಥೆಯಿದ್ದ ಕಡೆಗಳಲ್ಲಿ ಪ್ರತ್ಯೇಕ ಆರ್‌ಟಿಸಿ ಪಡೆದುಕೊಳ್ಳಲು ಈ ಅವಕಾಶವನ್ನು ಜನತೆ ಬಳಸಿಕೊಳ್ಳಬಹುದಾಗಿದೆ. ಯಾವುದೇ ವೆಚ್ಚ ಇಲ್ಲದೆ ಪ್ರತ್ಯೇಕ ಆರ್‌ಟಿಸಿಗಳನ್ನು ಪ್ರತ್ಯೇಕಿತ ಕುಟುಂಬಗಳು ಈ ಸರ್ವೇ ಸಂದರ್ಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಆರ್‌ಟಿಸಿಯಲ್ಲಿ ಇದ್ದ  ಜಮೀನಿನ ವಿಸ್ತೀರ್ಣವನ್ನು ತಾಳೆ ನೋಡುವ ಅವಕಾಶವೂ ದೊರೆಯುತ್ತದೆ. ಉಚಿತವಾಗಿ ಜಾಗದ ಪ್ಲಾಟಿಂಗ್ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement