ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಟಾರ್ಗೆಟ್‌' ಗ್ಯಾಂಗ್ ಸೂತ್ರಧಾರಿ ಉಳ್ಳಾಲ ಇಲಿಯಾಸ್ ವಿರುದ್ಧ ಗೂಂಡಾ ಕಾಯ್ದೆ ಜಾರಿ

Mainashree
Updated On : 4 Feb 2014, 10:27 am

ಮಂಗಳೂರು: ಉಳ್ಳಾಲದ ರೌಡಿ, 12 ಪ್ರಕರಣಗಳ ಆರೋಪಿ, ಟಾರ್ಗೆಟ್ ಗ್ಯಾಂಗ್‌ನ ಸೂತ್ರಧಾರಿ ಉಳ್ಳಾಲದ ಇಲಿಯಾಸ್ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
ಈತ ಉಳ್ಳಾಲ ಪರಿಸರದಲ್ಲಿ ಶ್ರೀಮಂತ ಉದ್ಯಮಿಗಳಿಗೆ ಹೆಣ್ಣಿನ ಆಮಿಷ ತೋರಿಸಿ, ಬಳಿಕ ಅವರನ್ನು ಅಪಹರಿಸಿ, ಅಶ್ಲೀಲ ಭಂಗಿಯಲ್ಲಿ ಚಿತ್ರ ತೆಗೆದು ಲಕ್ಷಾಂತರ ರುಪಾಯಿಗಳನ್ನು ಲೂಟಿ ಮಾಡುತ್ತಿದ್ದ. ಈತನ ತಂಡದಲ್ಲಿ ಮಹಿಳೆಯರೂ ಸೇರಿಕೊಂಡಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ವಿದ್ಯಾರ್ಥಿಗಳನ್ನು ಲೂಟಿ ಮಾಡುವ, ಬೆದರಿಸುವ ಕೃತ್ಯಗಳನ್ನು ಮಾಡುತ್ತಿದ್ದ. ಇತ್ತೀಚೆಗೆ ಈತನ ಜಾಲವನ್ನು ಭೇದಿಸಿರುವ ಪೊಲೀಸರು, ಈತನ ತಂಡ ಸದಸ್ಯರನ್ನು ಬಂಧಿಸಿದ್ದರು.
ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ನೀಲಿ ಚಿತ್ರ ಮಾಡಿದ ಪ್ರಕರಣದ ಬಳಿಕ ಪೊಲೀಸರು ಈ ಪರಿಸರದಲ್ಲಿನ ರೌಡಿಗಳ ಮಾಹಿತಿ ಕಲೆ ಹಾಕುತ್ತಿದ್ದು, ಆರಂಭದಲ್ಲಿ ಇಲಿಯಾಸ್ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿದ್ದಾರೆ.
ಈ ಕಾಯ್ದೆಯಡಿ ಇಲಿಯಾಸ್ 1 ವರ್ಷಗಳ ಕಾಲ ಬಿಡುಗಡೆಗೆ ಜಾಮೀನು ಅರ್ಜಿ ಹಾಕುವಂತಿಲ್ಲ, ಕಡ್ಡಾಯವಾಗಿ 1 ವರ್ಷ ಜೈಲಿನಲ್ಲಿರಬೇಕು. 'ಆರೋಪಿ ಇಲಿಯಾಸ್ ಕೊಲೆ, ಕೊಲೆ ಯತ್ನ, ಬೆದರಿಕೆ, ಅಪಹರಣ, ಬ್ಲಾಕ್‌ಮೇಲ್ ಮೊದಲಾದ 12 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಸೋಮವಾರ ಮಧ್ಯಾಹ್ನ ಇಲಿಯಾಸ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಎಸಿಪಿ ಪವನ್ ನಿಜ್ಜೂರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement