ಪೊಲೀಸ್ ಸರ್ಕಲ್
ತಾಪಂ ಸದಸ್ಯ ವಿರುದ್ಧ ಸುಳ್ಳು ದೂರು: ಖಂಡನೆ
ಬೆಳ್ತಂಗಡಿ: ತಾ.ಪಂ. ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಇಲಾಖೆಯ ವಿವಿಧ ಸಮಸ್ಯೆಗಳು ಮತ್ತು ಅವ್ಯವಹಾರಗಳಿಗೆ ಸಂಬಂಧಪಟ್ಟಂತೆ ತಾ.ಪಂ. ಸದಸ್ಯ ಮಂಜುನಾಥ್ ಸಾಲ್ಯಾನ್ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು ಎಂಬ ಕಾರಣಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಾಲ್ಯಾನ್ ವಿರುದ್ಧ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿರುವುದನ್ನು ತಾ.ಪಂ. ಬಿಜೆಪಿ ಸದಸ್ಯರು ತೀವ್ರವಾಗಿ ಖಂಡಿಸಿದ್ದು, ಅವರ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ತಾ.ಪಂ. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಲು ಮತ್ತು ಉತ್ತರ ಪಡೆಯಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಸಾಲ್ಯಾನ್ ಅವರು ತನ್ನ ಅಧಿಕಾರ ವ್ಯಾಪ್ತಿಯೊಳಗೆ ಕೇಳಿದ ಪ್ರಶ್ನೆಗಳಿಂದಾಗಿ ತಮ್ಮ ಅವ್ಯವಹಾರ, ಕರ್ತವ್ಯ ಚ್ಯುತಿ ಮುಂತಾದ ತಪ್ಪುಗಳು ಹೊರಬೀಳುತ್ತವೆ ಎಂಬ ಕಾರಣಕ್ಕಾಗಿ ಜನಪ್ರತಿನಿಧಿಗಳನ್ನು ಬೆದರಿಸಿ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಾಡಿದ್ದಾರೆ. ಇದನ್ನು ಬಿಜೆಪಿ ಬೆಂಬಲಿತ ಸದಸ್ಯರು ಖಂಡಿಸುವುದಾಗಿ ಹೇಳಿದರು. ತಾ.ಪಂ. ಅಧ್ಯಕ್ಷ ಕೇಶವ ಎಂ., ತಾ.ಪಂ. ಸದಸ್ಯ ವಿಜಯಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಮಂಜುನಾಥ ಸಾಲಿಯಾನ್, ಸುಧೀರ್ ಸುವರ್ಣ ಇದ್ದರು.
ಬಂಧನಕ್ಕೆ ಆಗ್ರಹ
ಮಂಗಳೂರು: ಬೆಳ್ತಂಗಡಿ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲ ಕುಚಿನಾಡವರ ವಿರುದ್ಧ ಸುಳ್ಳು ಆರೋಪ ಮಾಡಿ ವಾಗ್ದಾಳಿ ನಡೆಸಿದ ತಾ.ಪಂ. ಸದಸ್ಯ ಮಂಜುನಾಥ ಸಾಲಿಯಾನ್ ಅವರನ್ನು ಕೂಡಲೇ ಬಂಧಿಸುವಂತೆ ದ.ಕ. ಜಿಲ್ಲೆ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.
ತಾ.ಪಂ. ಸದಸ್ಯರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಬಗ್ಗೆ ಸಂಘಕ್ಕೆ ದೂರು ಬರುತ್ತಿದ್ದು, ಈ ಕುರಿತು ಮಹಿಳಾ ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಈ ಘಟನೆಯಿಂದ ನೊಂದ ಶಿಕ್ಷಣಾಧಿಕಾರಿಯವರಿಗೆ ಸರ್ಕಾರ ಸೂಕ್ತ ನ್ಯಾಯ ಒದಗಿಸಬೇಕು. ಪಂಚಾಯ್ತಿ ಸದಸ್ಯನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಎಸ್ಪಿಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಾರ್ಜ್ ಪಿಂಟೋ ಆಗ್ರಹಿಸಿದ್ದಾರೆ.
ಸಚಿವರಿಗೆ ಪತ್ರ
ಬೆಳ್ತಂಗಡಿ: ಸಾರ್ವಜನಿಕ ಹಿತಾಸಕ್ತಿಯಿಂದ ಜಡ್ಡುಗಟ್ಟಿದ ಆಡಳಿತ ಶಾಹಿಯನ್ನು ಪ್ರಶ್ನಿಸಿದ ಜನಪ್ರತಿನಿಧಿಯ ಹಕ್ಕು ಚ್ಯುತಿಯಾಗಿರುವ ಬಗ್ಗೆ ಬೆಳ್ತಂಗಡಿ ತಾ.ಪಂ. ಸದಸ್ಯ ಮಂಜುನಾಥ್ ಸಾಲಿಯಾನ್ ಅವರು ರಾಜ್ಯದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಿಗೆ ಪತ್ರಬರೆದಿದ್ದಾರೆ. 30ರಂದು ತಾ.ಪಂ. ಸಭೆಯಲ್ಲಿ ಶಾಲೆಗಳ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯವೈಖರಿಯ ಲೋಪದೋಷಗಳನ್ನು ಪೂರಕ ದಾಖಲೆಗಳೊಂದಿಗೆ ಸಭೆಯ ಮುಂದಿಟ್ಟಾಗ ತನ್ನ ಮೇಲಿನ ಲೋಪ ದೋಷಗಳನ್ನು ಮುಚ್ಚಿಟ್ಟು ಹತಾಶೆಯ ಭಾವದಿಂದ ಸಭೆಯ ಗಮನವನ್ನು ಬೇರೆಡೆಗೆ ತಿರುಗಿಸುವ ದುರುದ್ದೇಶದಿಂದ ಕುಸಿದು ಬಿದ್ದಂತೆ ನಾಟಕ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ತನ್ನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುವಂತೆ ಮಾಡಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಖಾತೆಗೆ ಜಮೆ ಮಾಡಿದ ಮೊತ್ತ ವ್ಯತ್ಯಾಸ: ದೂರು
ಸುಳ್ಯ: ಸುಳ್ಯದ ಬ್ಯಾಂಕ್ವೊಂದರಲ್ಲಿ ಜಮೆ ಮಾಡಿದ ಮೊತ್ತ ಒಂದು ಲಕ್ಷದಷ್ಟು ವ್ಯತ್ಯಾಸ ಬಂದಿದ್ದು, ಇದರ ಬಗ್ಗೆ ಗ್ರಾಹಕರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಜ. 3ರಂದು ಬ್ಯಾಂಕ್ನಲ್ಲಿ ರು. 3 ಲಕ್ಷ ಜಮೆ ಮಾಡಿದ್ದು, ಕ್ಯಾಷಿಯರ್ನಲ್ಲಿ ಹಣಕೊಟ್ಟು ಪಾಸ್ ಪುಸ್ತಕ ಪಡೆದು ಮನೆಗೆ ಹಿಂತಿರುಗಿದ್ದೆ. ಮನೆಗೆ ಬಂದು ನೋಡುವಾಗ ಪುಸ್ತಕದಲ್ಲಿ ರು. 2 ಲಕ್ಷ ಎಂದು ನಮೂದಿಸಲಾಗಿತ್ತು. ಬ್ಯಾಂಕ್ಗೆ ವಾಪಸ್ ಬಂದು ಕೇಳಿದಾಗ, ನೀವು ರು. 2 ಲಕ್ಷ ಕೊಟ್ಟಿರುವುದು ಅದಕ್ಕೆ ರಶೀದಿ ನೀಡಿದ್ದೇವೆ ಎಂದು ಬ್ಯಾಂಕ್ನವರು ಹೇಳುತ್ತಿದ್ದಾರೆ ಎಂದು ಕುದ್ಪಾಜೆ ಸೋಮಯ್ಯ ಮಾಸ್ತರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಬ್ಯಾಂಕ್ನವರನ್ನು ಮತ್ತು ಸೋಮಯ್ಯ ಮಾಸ್ತರನ್ನು ಠಾಣೆಗೆ ಬರಮಾಡಿ ತನಿಖೆ ನಡೆಸಿದರು. ಆದರೆ, ದೂರುದಾರರ ಆರೋಪಕ್ಕೆ ಪೂರಕವಾದ ದಾಖಲೆಗಳು ದೊರೆಯಲಿಲ್ಲ ಎನ್ನಲಾಗಿದೆ.
ಅಪಘಾತ: ವಿದ್ಯಾರ್ಥಿ ಸಾವು
ಸುಳ್ಯ: ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಕೇರಳ ತ್ರಿಶ್ಯೂರ್ ಸಮೀಪದ ಅಂಗಮೂಲಿ ಎಂಬಲ್ಲಿಯ ಜೆಸ್ಸಿ ಪಿ. ಜಾರ್ಜ್ ಅಂಗಮಾಲಿಯಲ್ಲಿ ನಡೆದ ಬೈಕ್ ಮತ್ತು ಬಸ್ ನಡುವಿನ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪರೀಕ್ಷೆ ಕಳೆದು ರಜೆಯಲ್ಲಿ ಊರಿಗೆ ಹೋಗಿದ್ದ ಜೆಸ್ಸಿ ತನ್ನ ಗೆಳೆಯನೊಂದಿಗೆ ಅಂಗಮಾಲಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ಬಸ್ಸೊಂದಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ಜೆಸ್ಸಿಗೆ 20 ವರ್ಷ ವಯಸ್ಸಾಗಿತ್ತು.
ಯುವತಿ ಆತ್ಮಹತ್ಯೆ
ಸುಳ್ಯ: ಜಾಲ್ಸೂರು ಗ್ರಾಮದ ಕುಕ್ಕಂದೂರು ನಿವಾಸಿ ಲಕ್ಷ್ಮಣ ಆಚಾರ್ಯ ಎಂಬವರ ಪುತ್ರಿ ಮಂಜುಳಾ (27) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತೋಟಕ್ಕೆ ಹೋಗಿದ್ದ ತಾಯಿ ವಾಪಸ್ ಮನೆಗೆ ಬಂದಾಗ ವಿಷಯ ಬಹಿರಂಗಗೊಂಡಿತು. ಈ ಬಗ್ಗೆ ಆಕೆಯ ಸಹೋದರ ಚಂದ್ರಶೇಖರ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಮಂಜುಳಾಗೆ ಮದುವೆ ಸಂಬಂಧ ಕೂಡಿ ಬರದೇ ಇದ್ದುದರಿಂದ ಮನನೊಂದು ಈ ಕೃತ್ಯ ಎಸಗಿರಬಹುದು ಎಂದು ತಿಳಿಸಿದ್ದಾರೆ.
ಹೊಳೆಯಲ್ಲಿ ಮುಳುಗಿ ಯುವಕ ಸಾವು
ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ಯುವಕನೊಬ್ಬ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರು ಹರ್ಷ (19), ಈತ ಇಲ್ಲಿನ ಪಿಳ್ಳಾಳ ಗರೋಡಿ ಸಮೀಪದ ನಿವಾಸಿ ಹರೀಶ ಚಾತ್ರ ಎಂಬವರ ಮಗ. ಭಾನುವಾರ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಸಮೀಪದ ಸ್ವರ್ಣ ನದಿಗೆ ಬಿದ್ದ ಚೆಂಡನ್ನು ಹೆಕ್ಕಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಅಸ್ವಸ್ಥನಾಗಿದ್ದ. ತಕ್ಷಣ ಬ್ರಹ್ಮಾವರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾನೆ. ಹರೀಶ್ ಚಾತ್ರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಬೆಟ್ಟು ದೇವಳದಲ್ಲಿ ಕಳ್ಳತನ
ಕಾಪು: ಇಲ್ಲಿನ ಮೂಡಬೆಟ್ಟು ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ. ಕಳ್ಳರು ದೇವಸ್ಥಾನದ ಬಡಗುಬದಿಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಈಶ್ವರ ದೇವರ ಬೆಳ್ಳಿ ಕಣ್ಣು ದೃಷ್ಟಿ ಒಂದು ಜೊತೆ, ಬೆಳ್ಳಿಯ ಕವಚವಿರುವ ಅಭಿಷೇಕ ಮಾಡುವ ಶಂಖ ಹಾಗೂ ಗಣಪತಿ ದೇವರ ಕಾಣಿಕೆ ಡಬ್ಬಿ ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರು. 12,000 ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಅಶೋಕ್ ರಾವ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿನಡಿ ಸಿಲುಕಿ ವ್ಯಕ್ತಿಗೆ ಗಾಯ
ಮೂಲ್ಕಿ: ಹಳೆಯಂಗಡಿ ಬಳಿ ರೈಲು ಟ್ರ್ಯಾಕ್ನಲ್ಲಿ ರೈಲಿನ ಅಡಿಗೆ ಸಿಲುಕಿ ವ್ಯಕ್ತಿಯೊಬ್ಬರ ಕಾಲಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಡುಬಿದ್ರಿಯ ಜಗದೀಶ್ ಆಚಾರ್ಯ ಎಂಬವರು ಹಳೆಯಂಗಡಿಯ ರೈಲು ಟ್ರ್ಯಾಕ್ ಬಳಿ ರೈಲಿನಡಿಗೆ ಕಾಲು ಸಿಕ್ಕಿ ಪಾದ ಕಳೆದುಕೊಂಡಿದ್ದಾರೆ. ಗಂಭೀರ ಗಾಯಗೊಂಡು ರೈಲು ಟ್ರ್ಯಾಕ್ ಬಳಿ ಬಿದ್ದಿದ್ದ ಜಗದೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಕಿನ್ನಿಗೋಳಿಯಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕಿದ್ದ ಜಗದೀಶ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಜಗದೀಶ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದು, ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಬೈಕ್ ಸವಾರಗೆ ಗಾಯ
ಮೂಲ್ಕಿ: ಕೆಮ್ರಾಲ್ನ ಹೊಸಕಾಡು ಬಳಿ ಬೈಕೊಂದು ಇನ್ನೊಂದು ಬೈಕ್ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಎಸ್. ಕೋಡಿಯಿಂದ ಪಕ್ಷಿಕೆರೆಗೆ ಹೋಗುತ್ತಿದ್ದ ಬೈಕ್ ಮತ್ತು ಪಕ್ಷಿಕೆರೆಯಿಂದ ಎಸ್ ಕೋಡಿಗೆ ಬರುತ್ತಿದ್ದ ಬೈಕೊಂ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ರೋಹಿತ್ ಶೆಟ್ಟಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಬೈಕ್ ಸವಾರ ಗಣೇಶ್ ಎಂಬಾತನ ಅತೀ ವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.