ಕೊರಗ ಮಕ್ಕಳ ಮನೆಪಾಠ ಜಿಲ್ಲೆಗೆ ವಿಸ್ತರಣೆ
ಮಂಗಳೂರು: ಶೈಕ್ಷಣಿಕವಾಗಿ ತೀರಾ ಹಿಂದುಳಿದ ಕೊರಗ ಸಮುದಾಯದ ಮಕ್ಕಳು ಈಗ ನಗರ ಮಟ್ಟದಲ್ಲಿ ಮಾತ್ರ ಮನೆ ಪಾಠ ಸೌಲಭ್ಯ ಪಡೆಯುತ್ತಿದ್ದಾರೆ. ಇದುವರೆಗೆ ವಂಚಿತವಾಗಿದ್ದ ಗ್ರಾಮಾಂತರ ಕೊರಗ ಮಕ್ಕಳೂ ಇನ್ನು ಮುಂದೆ ಮನೆ ಪಾಠ ಕೇಳಿಸಿಕೊಳ್ಳಲಿದ್ದಾರೆ.
ಕೊರಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಶೈಕ್ಷಣಿಕ ವಿಶೇಷ ಕ್ರಿಯಾ ಯೋಜನೆ ಇದೀಗ ಸರ್ಕಾರದ ಅನುಮೋದನೆಗೆ ಕಾಯುತ್ತಿದೆ. ಇದು ಅನುಷ್ಠಾನಗೊಂಡರೆ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಕೊರಗ ಮಕ್ಕಳು ಮನೆಪಾಠ ಸೌಲಭ್ಯ ಪಡೆಯುವಂತಾಗುತ್ತದೆ. ಆರ್ಥಿಕವಾಗಿಯೂ ಹಿಂದುಳಿದ ಕೊರಗ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಈ ಕಾರ್ಯಕ್ರಮ ಮಹತ್ವ ಎನಿಸಿದೆ.
ಕಾರ್ಯಕ್ರಮ ಯಾಕಾಗಿ?: ಕೊರಗ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಅನುಕೂಲಕ್ಕೆ ನಿರ್ಧರಿಸಿದ ಮಂಗಳೂರಿನ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ(ಐಟಿಡಿಪಿ) ಅಧಿಕಾರಿಗಳು ಈ ಹೊಸ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಕೊರಗ ಮಕ್ಕಳಲ್ಲಿ ಅರ್ಧದಲ್ಲೇ ಶಾಲೆ ಬಿಡುವವರ ಸಂಖ್ಯೆ ಹೆಚ್ಚು. ಈ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಿದಾಗ ಶೈಕ್ಷಣಿಕ ಮಟ್ಟ ಕುಸಿದಿರುವುದು ಕಂಡುಬಂದಿದೆ. ಅಲ್ಲದೆ ಇಂಗ್ಲಿಷ್ ಭಾಷೆ ಮೇಲೆ ಪ್ರಭುತ್ವ ಕೊರತೆ, ಸಂವಹನ ಕಲೆ ಇಲ್ಲದಿರುವುದು, ಆತ್ಮವಿಶ್ವಾಸದ ಕೊರತೆಯನ್ನು ಹೋಗಲಾಡಿಸುವುದು ಕಾರ್ಯಕ್ರಮದ ಉದ್ದೇಶ.
ಮನೆಪಾಠಕ್ಕೆ 26 ಲಕ್ಷ: 1ರಿಂದ 10ನೇ ತರಗತಿವರೆಗಿನ ಕೊರಗ ಮಕ್ಕಳಿಗೆ ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಮನೆಪಾಠಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 877 ಮಂದಿ ವಿದ್ಯಾರ್ಥಿಗಳಿಗೆ ರು. 26.31 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ. 1ರಿಂದ 5ನೇ ತರಗತಿವೆರೆಗೆ 230 ಬಾಲಕರು, 200 ಬಾಲಕಿಯರು ಸೇರಿ ಒಟ್ಟು 430. 6ನೇ ತರಗತಿಯಿಂದ 10ನೇ ತರಗತಿವರೆಗೆ 206 ಬಾಲಕರು ಮತ್ತು 231 ಬಾಲಕಿಯರು ಸೇರಿ ಒಟ್ಟು 447 ಮಕ್ಕಳು ಮನೆಪಾಠ ಪ್ರಯೋಜನ ಪಡೆಯಲಿದ್ದಾರೆ. ಇದು ಐದು ತಾಲೂಕುಗಳ ಏಳು ಶಿಕ್ಷಣ ಬ್ಲಾಕ್ಗಳಲ್ಲಿ ಅನುಷ್ಠಾನವಾಗಲಿದೆ.
ನಗರ ಪಾಠ ಯಶಸ್ವಿ: ಪ್ರಸ್ತುತ ಮಂಗಳೂರು ಉತ್ತರದ ಏಳು ಕಡೆ ಹಾಗೂ ಮೂಡುಬಿದಿರೆಯ ಮೂರು ಕಡೆಯಲ್ಲಿ ಮಾತ್ರ ಕೊರಗ ಮಕ್ಕಳಿಗೆ ಮನೆ ಪಾಠ ನಡೆಯುತ್ತಿದೆ. ಕಳೆದ ಮೂರು ವರ್ಷದಿಂದ ಈ ಮನೆ ಪಾಠ ನಡೆಯುತ್ತಿದ್ದು, ಪ್ರಾಯೋಗಿಕವಾಗಿ ಇದು ಯಶಸ್ವಿಯೂ ಆಗಿದೆ. ಪ್ರತಿ ಮನೆಪಾಠಕ್ಕೆ ಶಿಕ್ಷಕರಿಗೆ 6 ತಿಂಗಳಿಗೆ ತಲಾ ರು. 3 ಸಾವಿರದಂತೆ ಈವರೆಗೆ ರು. 4 ಲಕ್ಷ ವೆಚ್ಚ ಮಾಡಲಾಗಿದೆ ಎನ್ನುತ್ತಾರೆ ಐಟಿಡಿಪಿ ಅಧಿಕಾರಿಗಳು.
ಕಲಿಕಾ ಕಿಟ್ ನೀಡಿಕೆ: ಇದೇ ಯೋಜನೆಯಲ್ಲಿ ಈ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳ ಕಿಟ್ ಸಿಗಲಿದೆ. ನೋಟ್ಸ್ ಪುಸ್ತಕ, ಪೆನ್, ಜ್ಯಾಮೆಟ್ರಿ ಬಾಕ್ಸ್, ಬ್ಯಾಗ್, ಕನ್ನಡ ಇಂಗ್ಲೀಷ್ ಡಿಕ್ಷನರಿ ಒಳಗೊಂಡಿದೆ. ಈ ಮಕ್ಕಳು ಆಂಗ್ಲ ಭಾಷಾ ಪಾರಂಗತರಾಗಲು ವೀಟಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ರಜಾ ದಿನಗಳಲ್ಲಿ ಆಂಗ್ಲ ಭಾಷೆ ಮಾತನಾಡುವ ತರಬೇತಿ, ಅಲ್ಲದೆ ಈಜು ತರಬೇತಿ, 10ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಟ್ಯಾಬ್ಲೆಟ್, 6ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್, ಹಾಜರಾತಿಗೆ ಪ್ರೋತ್ಸಾಹ, ಶೈಕ್ಷಣಿಕ ಪ್ರವಾಸ, ಶಾಲೆ ಬಿಟ್ಟ ಮಕ್ಕಳಿಗೆ ವಿಶೇಷ ಟ್ಯೂಷನ್ ಕೇಂದ್ರ ಸ್ಥಾಪನೆ ಯೋಜನೆಯಲ್ಲಿ ಸೇರಿದೆ.
-ಆತ್ಮಭೂಷಣ್