ತನಿಖೆಗೆ ಸಚಿವ ರೈ ಸೂಚನೆ
ಮಂಗಳೂರು: ಪಾಣೆಮಂಗಳೂರು ಸೇತುವೆಯಲ್ಲಿ ಸೋಮವಾರ ರಸ್ತೆ ದುರಂತದಲ್ಲಿ ಮೃತಪಟ್ಟವರಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಬ್ಬರು ಮಕ್ಕಳು ಕೂಡ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದು, ಘಟನೆಗೆ ತಕ್ಷಣ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಚಿವ ರಮಾನಾಥ ರೈ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ನಾಳೆ ವಿದ್ಯುತ್ ನಿಲುಗಡೆ
ಮಂಗಳೂರು: ಕಾವೂರು-ಮೂಲ್ಕಿ, ಬೈಕಂಪಾಡಿ ಕೈಗಾರಿಕಾ ಫೀಡರ್ ಹಾಗೂ ಸುರತ್ಕಲ್ ಕೈಗಾರಿಕಾ ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಫೆ.6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಈ ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಸುರತ್ಕಲ್, ಕಾನ, ತಡಂಬೈಲ್, ಕಾಟಿಪಳ್ಳ, ಕುತ್ತೆತ್ತೂರು, ಚೇಳ್ಯಾರು, ಮುಕ್ಕ, ಸಸಿಹಿತ್ಲು, ಮೂಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಕಟೀಲು ಹಾಗೂ ಸುತ್ತಲಿನ ಪ್ರದೇಶ. ಎನ್ಐಟಿಕೆ, ರುಚಿಸೋಯ, ರಾಜಶ್ರೀ ಪ್ಯಾಕೇಜರ್ಸ್, ಬ್ರೈಟ್ ಪ್ಯಾಕೇಜರ್ಸ್, ಬಿಎಎಸ್ಎಫ್, ಎಚ್ಪಿಸಿಎಲ್, ಭಾರತ್ ಬ್ಯಾರಲ್, ಎಸ್ಇಝಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
7ರಂದು ಮಯ್ಯತ್ ನಮಾಜ್
ಮಂಗಳೂರು: ಉಳ್ಳಾಲದ ಖಾಝಿ ಶೈಖುನಾ ತಾಜುಲ್ ಉಲಾಮಾ ಸಯ್ಯದ್ ಅಬ್ದುಲ್ ರಹಮಾನ್ ಕುಂಞ ಕೋಯ ತಂಞಳ್ ಅಲ್ ಮುಖಾರಿ ನಿಧನ ಹಿನ್ನೆಲೆಯಲ್ಲಿ ಫೆ.7ರಂದು ಎಲ್ಲ ಮಸೀದಿಗಳಲ್ಲಿ ದುವಾ ಹಾಗೂ ಮಯ್ಯತ್ ನಮಾಜ್ ನಿರ್ವಹಿಸಬೇಕು ಎಂದು ಪಣಂಬೂರು ಮುಸ್ಲಿಂ ಜಮಾತ್ ಪ್ರಕಟಣೆ ತಿಳಿಸಿದೆ.
ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಮನವಿ
ಬಂಟ್ವಾಳ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರು. 5000 ಗೌರವಧನ ನೀಡುವಂತೆ ಒತ್ತಾಯಿಸಿ ಸಂಗಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು ಆರೋಗ್ಯ ಸಚಿವ ಯು.ಟಿ. ಖಾದರ್ಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ಲಕ್ಷಾಂತರ ಮಂದಿ ಆಶಾ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಮಟ್ಟದ ವಿವಿಧ ಆರೋಗ್ಯ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ ಇಲಾಖೆ ಸೌಲಭ್ಯಗಳನ್ನು ರಾಜ್ಯದ ಮೂಲೆ ಮೂಲೆಗಳಲ್ಲಿನ ಗ್ರಾಮೀಣ ಬಡ ಜನತೆಯ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ದುಡಿಮೆಗೆ ಸರ್ಕಾರ ಸ್ಪಂದಿಸದೆ ಇರುವುದು ಖೇದಕರ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸಮಾಜದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಆರೋಗ್ಯ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 5000 ಗೌರವಧನ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.