ಪಾಣೆಮಂಗಳೂರು ರಸ್ತೆ ದುರಂತ; ಮೂವರು ಮಕ್ಕಳ ಸ್ಥಿತಿ ಗಂಭೀರ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಸೇತುವೆಯಲ್ಲಿ ಸೋಮವಾರ ರಾತ್ರಿ ಬಸ್-ಆಟೋ ಡಿಕ್ಕಿಯಾಗಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಮೂವರು ಮಕ್ಕಳು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ಬರಿಮಾರು ಗ್ರಾಮದ ಮುಳಿಬೈಲು ನಿವಾಸಿಗಳಾದ ಭಾಸ್ಕರ (45), ಅವರ ಪತ್ನಿ ಪ್ರೇಮಾ (35), ಜಗದೀಶ (38), ಅವರ ಪತ್ನಿ ಸುಪ್ರೀತಾ (30) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಭಾಸ್ಕರ್-ಪ್ರೇಮಾ ದಂಪತಿ ಮಕ್ಕಳಾದ ರಿತಿಜ್ಞಾ (3), ಅಭಿಜ್ಞಾ (8), ಜಗದೀಶ- ಸುಪ್ರಿತಾ ದಂಪತಿ ಪುತ್ರ ಮೂರುವರೆ ವರ್ಷದ ನಿಶಾನ್‌ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಶಾನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ: ಬರಿಮಾರುವಿನ ಲಕ್ಷ್ಮಣ ಪೂಜಾರಿ ಎಂಬವರ ಮಕ್ಕಳಾದ ಭಾಸ್ಕರ ಹಾಗೂ ಜಗದೀಶ ತಮ್ಮ ಪತ್ನಿ, ಮಕ್ಕಳೊಂದಿಗೆ ಬಿ.ಸಿ. ರೋಡು ಕಡೆಯಿಂದ ಬರಿಮಾರುವಿನತ್ತ ತೆರಳುತ್ತಿದ್ದ ವೇಳೆ ರಾತ್ರಿ 11.35ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಒಂದೇ ಮನೆಯವರು..: ಬರಿಮಾರುವಿನ ಮುಳಿಬೈಲು ನಿವಾಸಿ ಲಕ್ಷಣ ಪೂಜಾರಿ ಮಕ್ಕಳಾದ ಭಾಸ್ಕರ ಹಾಗೂ ಜಗದೀಶ ಒಂದೇ ಮನೆಯಲ್ಲಿ ವಾಸ್ತವ್ಯ ಇದ್ದವರು. ಸೋಮವಾರ ರಾತ್ರಿ ಚಿಕ್ಕ ಸಹೋದರ ಜಯಂತ ಅವರ ನಾದಿನಿಯ ವಿವಾಹದ ಔತಣ ಮುಗಿಸಿ ವಾಪಾಗುತ್ತಿದ್ದ ವೇಲೆ ಈ ಕುಟುಂಬ ದುರಂತಕ್ಕೆ ಬಲಿಯಾಗಿದೆ. ಭಾಸ್ಕರ್ ರಿಕ್ಷಾ ಚಲಾಯಿಸುತ್ತಿದ್ದು, ಘಟನೆಯ ತೀವ್ರತೆಗೆ ನುಜ್ಜುಗುಜ್ಜಾದ ರಿಕ್ಷಾದೆಡೆಯಲ್ಲಿ ಸಿಲುಕಿದವರನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸಂಬಂಧಿ ಜಯಂತ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.