ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪುರೇಷೆ: ಡಿಸಿ

Lingaraj Badiger
Updated On : 5 Feb 2014, 11:28 am

ಮಂಗಳೂರು: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸ್ಪಷ್ಟ ಹಾಗೂ ಹಂತ ಹಂತದಲ್ಲಿ ಅನುಷ್ಠಾನಗೊಳಿಸಬಹುದಾದ ಕಾರ್ಯಕ್ರಮಗಳ ಸಮಗ್ರ ಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಪುನರ್ ರಚನೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಿರ್ದಿಷ್ಟ ರೂಪುರೇಷೆ ಹಾಕಿಕೊಳ್ಳಬೇಕು. ಸೀಮಿತ ಅವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಕೈಗೊಳ್ಳಬಹುದಾದ ಯೋಜನೆಗಳನ್ನು ತಯಾರಿಸಬೇಕು. ಪ್ರವಾಸೋದ್ಯಮದಲ್ಲಿ ಮಂಗಳೂರು ಗುರುತಿಸಬೇಕಾದರೆ ಇಲಾಖೆ ವಿವರವಾದ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಹೀಗಾದರೆ ಕೇರಳ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ ತಾಣಗಳ ಪಟ್ಟಿ ಇಲಾಖೆಯಲ್ಲಿ ಇಲ್ಲ. ಪ್ರಸ್ತುತ ಅವಿಭಜಿತ ಜಿಲ್ಲೆಯ ಪಟ್ಟಿ ಇದೆ. ಜಿಲ್ಲೆಯ ತಾಣಗಳ ಬಗ್ಗೆ ಸಮಗ್ರ ವಿವರ ಸಂಗ್ರಹಿಸಿ ಪಟ್ಟಿ ತಯಾರಿಸಬೇಕು. ಇದಕ್ಕೆ ಎನ್‌ಜಿಒ, ಸಂಘ ಸಂಸ್ಥೆಗಳ ನೆರವು ಪಡೆದು ಪ್ರತ್ಯೇಕ ಸಭೆ ನಡೆಸಬೇಕು ಎಂದು ಡಿಸಿ ಸೂಚಿಸಿದರು.
ಜಿಲ್ಲೆಯ ಕಟೀಲು, ವೇಣೂರು, ಕದ್ರಿ, ಕುಕ್ಕೆ, ಸುಳ್ಯ ಮುಂತಾದ ದೇವಸ್ಥಾನಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಧಾರ್ಮಿಕ ದತ್ತಿ ಇಲಾಖೆಗೆ ವಹಿಸಬೇಕು. ಇದರಿಂದ ಪ್ರವಾಸೋದ್ಯಮ ಇಲಾಖೆಗೆ ಇತರೆ ಪ್ರವಾಸಿ ತಾಣಗಳತ್ತ ದೃಷ್ಟಿ ಹರಿಸಲು ನೆರವಾಗುತ್ತದೆ ಎಂದರು.
ಅಕ್ವಾಮೆರೇನ್ ಪುನರ್ ಪರಿಶೀಲಿಸಿ: ತಣ್ಣೀರುಬಾವಿಯಲ್ಲಿ ಗಾಲ್ಫ್ ಕೋರ್ಸ್ ಮತ್ತು ಅಕ್ವಾಮೆರೇನ್ ಪಾರ್ಕ್ ಸ್ಥಾಪನೆಗೆ ಜಾಗ ಸ್ವಾಧೀನಪಡಿಸಲು ಬಂದರು ಇಲಾಖೆ ಅಡ್ಡಿಯಾಗಿದೆ ಎಂದು ಇಲಾಖೆ ಉಪನಿರ್ದೇಶಕ ಜಿತೇಂದ್ರ ಹೇಳಿದರು. ಖಾಸಗಿ ಸಂಸ್ಥೆ ನಿರ್ವಹಿಸಲಿದ್ದು, ದೊಡ್ಡ ಯೋಜನೆಯಾದ್ದರಿಂದ ಹೂಡಿಕೆ ಹಣ ವಾಪಸ್ ಬರಬೇಕು. ಈ ನಿಟ್ಟಿನಲ್ಲಿ ಯೋಜನೆ ಬಗ್ಗೆ ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ ಹೇಳಿದರು.
ತೂಗು ಸೇತುವೆ ತೂಗುಯ್ಯಾಲೆ: ಸುಲ್ತಾನ್‌ಬತ್ತೇರಿಯಿಂದ ತಣ್ಣೀರುಬಾವಿಗೆ ಪ್ರಸ್ತಾವಿತ ತೂಗುಸೇತುವೆ ನಿರ್ಮಾಣ ಹೊಣೆಯನ್ನು ನಿರ್ಮಿತಿ ಕೇಂದ್ರದಿಂದ ಲೋಕೋಪಯೋಗಿ ಇಲಾಖೆಗೆ ವಹಿಸಲು ಪತ್ರ ಕಳುಹಿಸಲಾಗಿದೆ. ಸೇತುವೆಗೆ ರು. 12 ಕೋಟಿ ಮಂಜೂರಾಗಿದ್ದು, 12 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕಿತ್ತು. ಬಿಡುಗಡೆಯಾದ ರು. 1 ಕೋಟಿಯಲ್ಲಿ ನಿರ್ಮಿತಿ ಕೇಂದ್ರ ಪಿಲ್ಲರ್ ಅಳವಡಿಸಿದ್ದು, ನಂತರ ಹಣ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿ ಜಿತೇಂದ್ರ ತಿಳಿಸಿದರು.  ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯಮ ಸಚಿವರ ಮಧ್ಯೆ ಚರ್ಚೆ ನಡೆದು ಇದು ಅಂತಿಮಗೊಳ್ಳಬೇಕಾಗಿದೆ. ಪ್ರವಾಸೋದ್ಯಮ ಸಹಿತ ಜಿಲ್ಲೆಯ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಶಾಸಕ ಲೋಬೋ ನುಡಿದರು. ನಗರ ವ್ಯಾಪ್ತಿಯಲ್ಲಿರುವ ಕುದ್ರು ಹಾಗೂ ವಿವಿಧ ಬೀಚ್‌ಗಳ ಅಭಿವೃದ್ಧಿ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್, ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಮಂಗಳೂರು ತಹಸೀಲ್ದಾರ್ ಮೋಹನ ರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement