ಮೀನುಗಾರಿಕಾ ಕೊಂಡಿ ರಸ್ತೆ ಅಭಿವೃದ್ಧಿಗೆ ರು. 13.5 ಕೋಟಿ ಅನುದಾನ: ಜೈನ್
ಮೂಲ್ಕಿ: ಜಿಲ್ಲೆಯಲ್ಲಿ ಮೀನುಗಾರಿಕಾ ಕೊಂಡಿ ರಸ್ತೆ ಅಭಿವೃದ್ಧಿ ಹಾಗೂ ನಬಾರ್ಡ್ ಯೋಜನೆಯಲ್ಲಿ ರು. 13.5 ಕೋಟಿ ಅನುದಾನ ಮಂಜೂರಾಗಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ರು. 6.5 ಕೋಟಿಯ ಯೋಜನೆಯ ಕಾಮಗಾರಿ ಆರಂಭಗೊಂಡಿದೆ ಎಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.
ಮೂಲ್ಕಿಯ ಬಪ್ಪನಾಡು ಬಡಗಹಿತ್ಲುವಿನಲ್ಲಿ ರು. 13 ಲಕ್ಷ ವೆಚ್ಚದ ಬಪ್ಪನಾಡು ಬಡಗಹಿತ್ಲು-ಜಲಕದ ಕಡಿ ಕೊಂಡಿ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಮೀನುಗಾರಿಕ ಪ್ರದೇಶಗಳಿಗೆ ಭೇಟಿ ನೀಡಿ ಆದ್ಯತೆಯ ಮೇರೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಮೀನುಗಾರಿಕಾ ಇಲಾಖೆಯ ಮಂಗಳೂರು ಉಪವಿಭಾಗದ ಎಂಜಿನಿಯರ್ ಸುಜನ್, ಜಿಲ್ಲಾ ಪಂಚಾಯಿತಿ ಸೀನಿಯರ್ ಎಂಜಿನಿಯರ್ ನಂಜೇಶ್ವಯ್ಯ, ಎಂಜಿನಿಯರ್ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ಯಾಲೆಟ್ ಪಿಂಟೋ, ಹಳೆಯಂಗಡಿ ಪಂಚಾಯಿತಿ ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್, ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್, ಹರೀಶ್ ಕರ್ಕೇರ, ಲೋಲಾಕ್ಷ ಕರ್ಕೇರಾ, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯ ಪುರುಷೋತ್ತಮ ರಾವ್ ಇದ್ದರು.