ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರೌಡಿಯ ಬಸ್ಸಿಂದೆಳೆದು ಕಡಿದು ಬರ್ಬರ ಕೊಲೆ

Lingaraj Badiger
Updated On : 5 Feb 2014, 11:33 am

ಮಂಗಳೂರು: ಕೊಲೆಗೆ ಪ್ರತಿಕಾರವಾಗಿ ಹಾಡಹಗಲೇ ಮತ್ತೊಬ್ಬ ರೌಡಿಯ ಹೆಣ ರಸ್ತೆ ಮೇಲೆ ಬಿದ್ದಿದೆ. ಸುರತ್ಕಲ್ ಎಂಜಿನಿಯರಿಂಗ್ ಕಾಲೇಜ್ ಮುಂಭಾಗದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಳಾಯಿಯ ಪ್ರಕಾಶ್ (30) ಎಂಬಾತನನ್ನು ಹೊರಗೆಳೆದ ಹಂತಕರ ಪಡೆ, ಎಲ್ಲರ ಎದುರೇ ತಲವಾರ್‌ಗಳಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದೆ.
 ಪ್ರಕಾಶ್ ಈತ ಮೆಕ್ಯಾನಿಕ್ ಶಿವರಾಜ್ ಕೊಲೆ ಪ್ರಕರಣದ ಆರೋಪಿ. ಪಣಂಬೂರು ಪೊಲೀಸ್ ಠಾಣೆಗೆ ತಂದೆ ಜತೆ ಬಂದು ಸಹಿ ಹಾಕಿದ ಬಳಿಕ ಪ್ರಕಾಶ್ ಬಸ್‌ನಲ್ಲಿ ಉಡುಪಿಗೆ ಕೆಲಸಕ್ಕೆಂದು ತೆರಳಿದ್ದ. ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಕೆಆರ್‌ಇಸಿ ಕಾಲೇಜ್ ಮುಂಭಾಗ ಒಮ್ನಿ ಕಾರ್‌ನಲ್ಲಿ ಬಂದು ಬಸ್ ತಡೆದ ನಾಲ್ವರು ದುಷ್ಕರ್ಮಿಗಳು ಪ್ರಕಾಶ್‌ನನ್ನು ಹೊರಗೆಳೆದು ತಲವಾರ್‌ಗಳಿಂದ ಮುಖ, ಕೈ, ಕಾಲುಗಳಿಗೆ ಕಡಿದು ಭೀಕರವಾಗಿ ಕೊಲೆ ಮಾಡಿದ್ದಾರೆ.
 ಹೊಡೆದ ರಭಸಕ್ಕೆ ಮುಂಗೈ ತುಂಡಾಗಿ ಬಿದ್ದಿದೆ, ಮುಖದ ಒಂದು ಭಾಗ ತುಂಡು, ತುಂಡಾಗಿ ಹೋಗಿದೆ. ಎಲ್ಲರೂ ನೋಡುತ್ತಿದ್ದರೂ ತಪ್ಪಿಸುವ ಧೈರ್ಯ ಮಾತ್ರ ಯಾರಿಗೂ ಬಂದಿಲ್ಲ. ಏಳು ನಿಮಿಷದೊಳಗೆ ಕೆಲಸ ಮುಗಿಸಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಮೂರು ಮಂದಿ ತಲವಾರ್‌ಗಳಿಂದ ಕಡಿಯುತ್ತಿದ್ದರೆ, ಒಬ್ಬಾತ ಕಾರ್‌ನಲ್ಲಿದ್ದ ಎನ್ನಲಾಗಿದೆ.
ಶಿವರಾಜ್ ಕೊಲೆಗೆ ಪ್ರತೀಕಾರ?: ಕುಂಟಿಕಾನದ ಕಾರ್ ಶೋರೂಮ್‌ನಲ್ಲಿ ಮೆಕ್ಯಾನಿಕ್ ಆಗಿದ್ದ ಶಿವರಾಜ್  2012ರ ಜು.10ರಂದು ಕೋಡಿಕೆರೆ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನನ್ನು ಕಾರ್‌ನಲ್ಲಿ ಬಂದಿದ್ದ ಹಂತಕರು ಕಾರ್ ದುರಸ್ತಿಗೆ ಎಂದು ಹೇಳಿ ಕರೆದುಕೊಂಡು ಹೋಗಿ, ಕೊಲೆ ಮಾಡಿ ರೈಲು ಹಳಿಯಲ್ಲಿ ಎಸೆದಿದ್ದರು. ಒಂದು ವಾರದೊಳಗೆ ಆರೋಪಿ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಪಣಂಬೂರು ಪೊಲೀಸ್ ಠಾಣೆಗೆ ನಿತ್ಯ ಬಂದು ಸಹಿ ಹಾಕುತ್ತಿದ್ದ. ಇದೇ ಸಮಯವನ್ನು ವಿರೋಧಿಗಳು ಬಳಸಿಕೊಂಡಿದ್ದಾರೆ.
ತನಿಖೆ ವೈಫಲ್ಯ: ಮೇಲುನೋಟಕ್ಕೆ ಶಿವರಾಜ್ ಕೊಲೆಗೆ ಪ್ರತೀಕಾರವಾಗಿ ಪ್ರಕಾಶ್ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಶಿವರಾಜ್‌ನನ್ನು ಮಹಿಳೆ ವಿಚಾರದಲ್ಲಿ ಕೊಲೆ ಮಾಡಿರಬಹುದು ಎಂಬ ನಿಟ್ಟಿನಲ್ಲಿ ಆರಂಭದಲ್ಲಿ ತನಿಖೆ ನಡೆದಿತ್ತು.
 ಆರೋಪಿಗಳನ್ನು ವಿಚಾರಣೆ ಮಾಡಿದಾಗ 'ದುಬೈಯಿಂದ ಒಬ್ಬರು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದರು' ಎಂದು ಹೇಳಿದ್ದರು. ಆ ಬಳಿಕ ಸರಿಯಾಗಿ ತನಿಖೆ ನಡೆಸಲಾಗಿಲ್ಲ. ಒತ್ತಡದಿಂದ ವಿಚಾರಣೆ ಅರ್ಧದಲ್ಲಿಯೇ ಕೈಬಿಡಲಾಗಿತ್ತು ಎಂಬ ಆರೋಪ ಪೊಲೀಸರ ಮೇಲೆ ಕೇಳಿಬಂದಿತ್ತು. ಈಗ ಆರೋಪಿಯೊಬ್ಬನ ಹತ್ಯೆ ನಡೆದಿದೆ.
ವೃತ್ತಿಪರ ಹಂತಕರು: ಹಂತಕರ ಕೊಲೆ ಮಾಡುವ ಶೈಲಿಯಿಂದ ಇವರು ಪಕ್ಕಾ ವೃತ್ತಿಪರ ಹಂತಕರು ಎಂಬುದು ಗೊತ್ತಾಗುತ್ತದೆ.
 ಹಾಡಹಗಲೇ ಎಲ್ಲರೆದುರೇ ಕೊಲೆ ಮಾಡಲು ಅದೂ ಬರ್ಬರ ರೀತಿಯಲ್ಲಿ ಮಾಡಬೇಕಾದರೆ ಅವರು ಕಡಿಯುವುದರಲ್ಲಿ ವೃತ್ತಿಪರರೇ ಆಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ವೃತ್ತಿಪರ ಹಂತಕ ರೌಡಿಗಳ ಗ್ಯಾಂಗ್ ಪಟ್ಟಿ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement