ಖಜಾನೆ ಸಿಬ್ಬಂದಿ ಕೊರತೆ, ಸಂಬಳ ವಿಳಂಬ
ಪುತ್ತೂರು: ತಾಲೂಕು ಖಜಾನೆ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣ ಶಿಕ್ಷಕರ ಸಂಬಳ ವಿಳಂಬವಾಗುತ್ತಿದೆ. ತಿಂಗಳ ಮೊದಲ ದಿನವೇ ಸಂಬಳ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಆಯುಕ್ತರು ಆದೇಶವನ್ನು ಹೊರಡಿಸಿದ್ದು, ಮೊದಲ ದಿನವೇ ಸಂಬಳ ನೀಡದೇ ಇದ್ದರೆ ಶಿಕ್ಷಣಾಧಿಕಾರಿಯೇ ಜವಾಬ್ದಾರಿ ಎಂದು ಆಯುಕ್ತರು ತಿಳಿಸಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಒಟ್ಟು 1480 ಮಂದಿ ಶಿಕ್ಷಕರಿದ್ದಾರೆ. ಯಾರಿಗೂ ತಿಂಗಳ ಮೊದಲ ದಿನ ಸಂಬಳ ಸಿಗುತ್ತಿಲ್ಲ. ಈ ಕುರಿತು ಶಿಕ್ಷಕರಿಂದ ದೂರುಗಳು ಬರುತ್ತಿದೆ. ಇದಕ್ಕೆಲ್ಲಾ ಕಾರಣ ಖಜಾನಾ ಇಲಾಖೆಯಲ್ಲಿ ಇರುವ ಸಿಬ್ಬಂದಿ ಕೊರತೆ. ಇಲಾಖೆಯಲ್ಲಿ ಮೂವರು ಸಿಬ್ಬಂದಿ ಕೊರತೆಯಿದೆ. ಸಿಬ್ಬಂದಿ ನೇಮಕವಾದರೆ ಸಮಸ್ಯೆ ಪರಿಹಾರವಾಗಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಕೆಡಿಪಿ ಸಭೆಯಲ್ಲಿ ತಾಲೂಕು ಪಂಚಾಯಿತಿ ಆಧ್ಯಕ್ಷರ ಗಮನಕ್ಕೆ ತಂದರು.
ತಾಲೂಕು ಕೆಡಿಪಿ ಸಭೆ ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಅಧ್ಯಕ್ಷತೆಯಲ್ಲಿ ಬುಧವಾರ ತಾ. ಪಂ. ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮಾಹಿತಿ ನೀಡಿದ ಶಿಕ್ಷಣಾಧಿಕಾರಿ, ಶಿಕ್ಷಕರಿಗೆ ಸಂಬಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷೆ ಶಶಿಪ್ರಭಾ, ಈ ವಿಚಾರವನ್ನು ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಸಮಸ್ಯೆ ಇತ್ಯರ್ಥ್ಥವಾಗಲಿದೆ ಎಂದರು.
ಖಜಾನೆ ಸಿಬ್ಬಂದಿ ಕೊರತೆಯಿಂದ ವಿವಿಧ ಇಲಾಖೆಯಲ್ಲಿರುವ ಸರ್ಕಾರಿ ಸಿಬ್ಬಂದಿ ಸಂಬಳದಲ್ಲೂ ವಿಳಂಬವಾಗುತ್ತಿದೆ. ಈ ಸಮಸ್ಯೆ ಎಲ್ಲರನ್ನೂ ಬಾಧಿಸಿದೆ ಎಂದು ಸಭೆಯಲ್ಲಿದ್ದ ಇತರ ಅಧಿಕಾರಿಗಳು ಪ್ರಸ್ತಾಪಿಸಿದರು.
ವಸತಿ ಯೋಜನೆ ತಡೆ ತೆರವು: ಬಸವ ವಸತಿ ಯೋಜನೆಯಡಿ ಆಶ್ರಯ ಮನೆಗಳಿಗೆ ಅರ್ಜಿ ಹಾಕಿದ್ದ 1109 ಮನೆ ಅರ್ಜಿಯನ್ನು ವಿವಿಧ ಕಾರಣಗಳಿಗೆ ತಡೆ ಹಿಡಿಯಲಾಗಿತ್ತು. ತಡೆ ಹಿಡಿಯಲಾದ ಎಲ್ಲಾ ಮನೆಗಳ ತಡೆಯನ್ನು ಇಲಾಖೆ ತೆರವುಗೊಳಿಸಿದ್ದು ಎಲ್ಲಾ ಮನೆಗಳಿಗೆ ಅನುದಾನ ನೀಡಲಾಗುತ್ತದೆ.
ವಸತಿ ಯೋಜನೆಯಡಿ ಅರ್ಜಿ ಹಾಕಲಾಗಿದ್ದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಅನುದಾನ ಮಂಜೂರಾಗಲಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
2013-14 ನೇ ಸಾಲಿನಲ್ಲಿ ತಾಲೂಕಿನ ಈಶ್ವರಮಂಗಲ ರಸ್ತೆ ಕಾಮಗಾರಿ, ಮಾಡ್ನೂರು ಸೇತುವೆ ಕಾಮಗಾರಿ, ನಿಡ್ಪಳ್ಳಿ ಪಾಣಾಜೆ ರಸ್ತೆ, ಅಮ್ಚಿನಡ್ಕ ನೆಟ್ಟಾರು ರಸ್ತೆ, ಹಂಟ್ಯಾರ್-ಬೆಟ್ಟಂಪಾಡಿ ರಸ್ತೆ, ಕುಮಾರಧಾರ ನದಿಗೆ ಶಾಂತಿಮೊಗೇರು ಎಂಬಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಲೋಕೋಪಯೋಗಿ ಅಧಿಕಾರಿಗಳು ಮಾಹಿತಿ ನೀಡಿದರು.
ತಾ.ಪಂ.ಉಪಾಧ್ಯಕ್ಷ ಬಾಬು ಮಾದೋಡಿ, ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಆಲಡ್ಕ, ಕಾರ್ಯನಿರ್ವಹಣಾಧಿಕಾರಿ ವಿಜಯ ಗೌಡ, ತಾ.ಪಂ ಲೆಕ್ಕಾಧಿಕಾರಿ ನಾಗರಾಜ್ ಇದ್ದರು.