ಬೆಳ್ತಂಗಡಿ: ಅಧಿಕಾರಿಗಳ ಬಹಿಷ್ಕಾರಕ್ಕೆ ತಾಪಂ ಪ್ರಗತಿ ಪರಿಶೀಲನಾ ಸಭೆ ರದ್ದು
ಬೆಳ್ತಂಗಡಿ: ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆಯಬೇಕಾಗಿದ್ದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ತಾಲೂಕಿನ ಅಧಿಕಾರಿಗಳ ಸಾಮೂಹಿಕ ಬಹಿಷ್ಕಾರದಿಂದಾಗಿ ರದ್ದುಗೊಂಡಿತು.
ಸಭೆ ಆರಂಭಿಸಲು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಗಮಿಸಿದರು. ಆದರೆ ಯಾವುದೇ ಅಧಿಕಾರಿಗಳು ಸಭೆಗೆ ಬಾರದ ಹಿನ್ನಲೆಯಲ್ಲಿ ಸಭೆ ರದ್ದು ಪಡಿಸುವುದಾಗಿ ಅಧ್ಯಕ್ಷರು ಪ್ರಕಟಿಸಿದರು.
ಗೈರು ಹಿನ್ನೆಲೆ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಸಿದು ಬಿದ್ದ ಶಿಕ್ಷಣಾಧಿಕಾರಿಗಳ ನೆರವಿಗೆ ತಾಲೂಕು ಸರ್ಕಾರಿ ನೌಕರರ ಸಂಘ ಧಾವಿಸಿದ್ದು ಪ್ರಶ್ನೆ ಕೇಳಿದ ಸದಸ್ಯರ ಬೆಂಬಲಕ್ಕೆ ಆಡಳಿತ ಪಕ್ಷದ ತಾ.ಪಂ. ಸದಸ್ಯರು ನಿಂತಿದ್ದಾರೆ. ತಾ.ಪಂ. ಸದಸ್ಯ ಕ್ಷಮೆ ಕೇಳಬೇಕೆಂದು ನೌಕರರ ಸಂಘ ಪಟ್ಟು ಹಿಡಿದಿದ್ದು ತಿಕ್ಕಾಟ ಮುಂದುವರಿದಿದೆ.
ಇದರ ಪರಿಣಾಮವಾಗಿ ಬುಧವಾರ ಆಯೋಜಿಸಲಾದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ನಿರೀಕ್ಷೆಯಂತೆ ಎಲ್ಲ ಸರ್ಕಾರಿ ಅಧಿಕಾರಿಗಳೂ ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಣ ಸಂಘರ್ಷ ತಾರಕಕ್ಕೇರಿದೆ.
ಗುರುವಾರದಿಂದ ನಡೆಯಲಿರುವ ಮಿತ್ತಬಾಗಿಲು ಹಾಗೂ ಶಿಶಿಲ ಗ್ರಾಮ ಸಭೆಗಳಿಗೆ ಬಹಿಷ್ಕಾರ ಹಾಕುವುದಾಗಿ ನೌಕರರ ಸಂಘ ಹೇಳಿದೆ.
ಖಾಲಿ ಸಭೆ: ತಾ.ಪಂ. ಅಧ್ಯಕ್ಷ ಕೇಶವ ಎಂ., ಉಪಾಧ್ಯಕ್ಷೆ ಗೀತಾ, ಕಾರ್ಯನಿರ್ವಹಣಾಧಿಕಾರಿ ಮಹಂತೇಶ್ ಹಾಗೂ ಮೂವರು ಸಿಬ್ಬಂದಿ ಮಾತ್ರ ಸಭಾಂಗಣದಲ್ಲಿ ಹಾಜರಾದರು. ಸಂಘದವರು ಕಾರ್ಯನಿರ್ವಹಣಾಧಿಕಾರಿಗಳಿಗೆ, ಪ್ರಗತಿಪರಿಶೀಲನಾ ಸಭೆಗೆ ಬಹಿಷ್ಕಾರ ಹಾಕುವುದಾಗಿ ಮುಂಚೆಯೇ ತಿಳಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗೆ ಪ್ರಶ್ನೆ ಕೇಳಿದ ಸದಸ್ಯ ಮಂಜುನಾಥ ಸಾಲಿಯಾನ್ ಕ್ಷಮೆ ಕೇಳಬೇಕೆಂದು ಸಂಘ ಪಟ್ಟು ಹಿಡಿದಿತ್ತು. ಕ್ಷಮೆ ಕೇಳಲು ಸಾಲಿಯಾನ್ ಸಿದ್ಧರಿಲ್ಲದ ಕಾರಣ, ಪ್ರತ್ಯೇಕವಾಗಿ ಪೊಲೀಸ್ ದೂರು ದಾಖಲಾದ ಕಾರಣ ಪ್ರಕರಣದಲ್ಲಿ ಬಿಜೆಪಿ ಗಟ್ಟಿ ನಿಲುವು ತಳೆದಿತ್ತು. ಹಾಗಾಗಿ ಸಭೆಗೆ ಅಧಿಕಾರಿಗಳು ಸಾಮೂಹಿಕ ಬಹಿಷ್ಕಾರ ಹಾಕಿದರು.
ಬಹಿಷ್ಕಾರ ಸಲ್ಲದು: ಸುದ್ದಿಗಾರರೊಂದಿಗೆ ಮಾತನಾಡಿದ ತಾ.ಪಂ. ಅಧ್ಯಕ್ಷ ಕೇಶವ, ಪ್ರಶ್ನೆ ಕೇಳುವ ಅಧಿಕಾರ ಸದಸ್ಯರಿಗೆ ಇದ್ದು ಅಧಿಕಾರಿಗಳು ಸಭೆ ಬಹಿಷ್ಕಾರ ಮಾಡುವಂತಿಲ್ಲ. ಇದು ಕೆಪಿಆರ್ ಕಾಯ್ದೆಯ ಉಲ್ಲಂಘನೆ. ಆದ್ದರಿಂದ ಮೇಲಧಿಕಾರಿಗಳಿಗೆ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದು. ಅಧಿಕಾರಿಗಳು ಬಹಿಷ್ಕಾರ ಹಾಕಲು ನೌಕರರ ಸಂಘದ ಅಧ್ಯಕ್ಷ ಕಾರಣ. ಅತ್ಯಂತ ಭ್ರಷ್ಟ ಇಲಾಖೆಯಾದ ಶಿಕ್ಷಣ ಇಲಾಖೆಗೆ ಬೆಂಬಲ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸದನವನ್ನು ಬ್ಲಾಕ್ಮೇಲ್ ಮಾಡಿದ್ದು ಅವರ ಆರೋಗ್ಯ ಸಮಸ್ಯೆಯನ್ನು ನಮ್ಮ ತಲೆಗೆ ಕಟ್ಟಿದ್ದಾರೆ ಎಂದರು.
ವ್ಯಕ್ತಿ ವಿರುದ್ಧ ಹೋರಾಟ: ಮಾಧ್ಯಮದವರ ಜತೆ ಮಾತನಾಡಿದ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯಕೀರ್ತಿ ಜೈನ್, ಸಭೆಗೆ ಬಹಿಷ್ಕಾರ ಹಾಕುವ ಕುರಿತು ಮೇಲಾಧಿಕಾರಿಗಳಿಗೆ ಲಿಖಿತ ಮಾಹಿತಿ ನೀಡಲಾಗಿದೆ. ನಮ್ಮ ಹೋರಾಟ ಅವಮಾನ ಮಾಡಿದ ಸದಸ್ಯನ ವಿರುದ್ಧವೇ ಹೊರತು ಪಕ್ಷ ಅಥವಾ ಆಡಳಿತದ ವಿರುದ್ಧವಲ್ಲ. ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಯಲಿದೆ. ನಾಳೆಯಿಂದ ನಡೆಯುವ ಗ್ರಾಮ ಸಭೆಗಳಿಗೆ ಬಹಿಷ್ಕಾರ ಹಾಕಲಿದ್ದೇವೆ. ನಮ್ಮ ಪ್ರತಿಭಟನೆಯಿಂದ ಜನಸಾಮಾನ್ಯರ ಯಾವುದೇ ಕೆಲಸಗಳಿಗೆ ತೊಂದರೆ ಮಾಡುವುದಿಲ್ಲ ಎಂದರು.
ತಾ.ಪಂ. ಅಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿ ಈ ಹೋರಾಟ ತನ್ನೊಬ್ಬನ ನಿಲುವಲ್ಲ. ಸಂಘಟನೆಯ ತೀರ್ಮಾನ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೂಡಾ ತಮಗೆ ಬೆಂಬಲ ಕೊಟ್ಟಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಗ್ರಾ.ಪಂ. ಸದಸ್ಯ ಕೆ.ಎಸ್. ಅಬ್ದುಲ್ಲ ಕರಾಯ, ಹನೀಫ್ ಡಿ.ಕೆ., ಶೇಕುಂಞ ಇದ್ದರು.