ಉಳ್ಳಾಲ ದಾಂದಲೆಬಿಜೆಪಿ ಖಂಡನೆ
ಮಂಗಳೂರು: ಉಳ್ಳಾಲದಲ್ಲಿ ಕಿಡಿಗೇಡಿಗಳು ನಡೆಸಿದ ದಾಂಧಲೆಯನ್ನು ಬಿಜೆಪಿ ಖಂಡಿಸಿದೆ. ಮೊಗವೀರಪಟ್ಣದಲ್ಲಿ ಮನೆಗಳಿಗೆ ಕಲ್ಲು ತೂರಿ, ಬೋಟ್‌ಗಳಿಗೆ ಬೆಂಕಿ ಹಚ್ಚಿ, ವಾಹನ ಧ್ವಂಸಗೊಳಿಸಿ, ಅಮಾಯಕರ ಮೇಲೆ ನಡೆಸಿರುವ ದೌರ್ಜನ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಮತಬ್ಯಾಂಕ್ ರಾಜಕೀಯ ಫಲ ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಗುರುವಾರ ಉಳ್ಳಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಅಧಿಕಾರಿಕ್ಕೆ ಬಂದ ಬಳಿ ಉಳ್ಳಾಲದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮಿತಿ ಮೀರಿದ್ದು, ತಾಲಿಬಾನಿ ಸಂಸ್ಕೃತಿ ತಲೆ ಎತ್ತಿದೆ. ದೇರಳಕಟ್ಟೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಉಳ್ಳಾಲದದಲ್ಲಿ ಯುವತಿಯರ ಬಲಾತ್ಕಾರ ಯತ್ನ, ಕೆ.ಸಿ.ರೋಡ್‌ನಲ್ಲಿ ಯುವಕನ ಮೇಲೆ ಹಲ್ಲೆ ಇವೆಲ್ಲವೂ ಹಿಂದೂ ಸಮಾಜದ ಮೇಲೆ ನಡೆಯುವ ದಾಳಿ. ಶಾಸಕರು, ಸಚಿವರು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಈ ಮೂಲಕ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದರು.
ಗಲಭೆಗೆ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಮೋದಿ ಅವರ ಮೇಲೆ ಜನರ ಒಲವು ಹೆಚ್ಚಾಗುತ್ತಿರುವುದು. ಫೆ.18ರಂದು ಮಂಗಳೂರಲ್ಲಿ ಮೋದಿ ಪ್ರಚಾರ ಸಭೆ ನಡೆಯಲಿದ್ದು, ಅದನ್ನು ಹತ್ತಿಕ್ಕಲು ಗಲಭೆ ನಡೆಸಲಾಗುತ್ತಿದೆ ಎಂದರು.
ಗಲಭೆಗೆ ಕಾರಣರಾದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಬು ಬಂಗೇರ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಯಶವಂತ ಅಮೀನ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಯುವಮೋರ್ಚಾ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಸುರೇಂದ್ರ ಶೆಟ್ಟಿ ಇದ್ದರು.