ಕಲ್ಲುತೂರಾಟ, ಲಾಠಿಚಾರ್ಜ್
ಮಂಗಳೂರು: ಉಳ್ಳಾಲ ಮೊಗವೀರಪಟ್ಣದಲ್ಲಿ ಗುಂಪು ಗಲಭೆ ಬಳಿಕ, ನಗರ ಕಮಿಷನರ್ ಆರ್.ಹಿತೇಂದ್ರ ನೇತೃತ್ವದಲ್ಲಿ ಶಾಂತಿ ಸಭೆ ಮುಗಿಯುತ್ತಿದ್ದಂತೆ, ಗುರುವಾರ ರಾತ್ರಿ ಮತ್ತೆ ಘರ್ಷಣೆ ಭುಗಿಲೆದ್ದಿದೆ. ಕೋಟೆಪುರದಲ್ಲಿ ರಾತ್ರಿ ಕಲ್ಲು ತೂರಾಟ ನಡೆದು
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಉಳ್ಳಾಲದಲ್ಲಿ ಗುರುವಾರ ಕಮಿಷನರ್ ನೇತೃತ್ವದಲ್ಲಿ ಎರಡೂ ಸಮುದಾಯದವರನ್ನು ಸೇರಿಸಿ ನಡೆದ ಶಾಂತಿ ಸಭೆ ಮುಗಿದ ತಕ್ಷಣ ಕೋಟೆಪುರದಲ್ಲಿ ಒಂದು ಸಮುದಾಯದವರಿಗೆ ಸೇರಿದ ಬೋಟುಗಳ ಮೇಲೆ ಕಲ್ಲು ತೂರಾಟ ಬಗ್ಗೆ ಪೊಲೀಸರರಿಗೆ ಮಾಹಿತಿ ಬಂದಿದೆ.
ತಕ್ಷಣ ಪೊಲೀಸರು ಜೀಪುಗಳಲ್ಲಿ ಕೋಟೆಪುರದತ್ತ ತೆರಳಲು ಸಿದ್ಧರಾದಾಗ ಮೊಗವೀರರು ತಾವೂ ಬರುವುದಾಗಿ ಪಟ್ಟು ಹಿಡಿದರು.
ಆದರೆ, ಪೊಲೀಸರು ಲೆಕ್ಕಿಸದೆ ಕೋಟೆಪುರಕ್ಕೆ ಧಾವಿಸಿದರು. ಅತ್ತ ಪೊಲೀಸರು ಹೋಗುತ್ತಿದ್ದಂತೆ, ಇತ್ತ ಮೀನುಗಾರರು ತಮ್ಮ ಬೋಟುಗಳ ರಕ್ಷಣೆಗಾಗಿ ಕೋಟೆಪುರದತ್ತ ತೆರಳಿದ್ದಾರೆ. ಆಗ ಎರಡೂ ಕಡೆಗಳಿಂದ ಪರಸ್ಪರ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ದುಷ್ಕೃತ್ಯದಲ್ಲಿ ತೊಡಗಿದವರನನ್ನು ಪತ್ತೆಹಚ್ಚಲು ಪೊಲೀಸರು ರಾತ್ರಿ ಎರಡೂ ಕಡೆಯವರ ಮನೆಗಳಿಗೆ ನುಗ್ಗಿ ತಪಾಸಣೆ ನಡೆಸಿದ್ದಾರೆ.
ವಹಿವಾಟು ಬಂದ್: ಘರ್ಷಣೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಗುರುವಾರ ಅಂಗಡಿಗಳು ಬಂದ್ ಆಗಿವೆ. ಬಸ್‌ಗಳು ಖಾಲಿಯಾಗಿ ಸಂಚರಿಸಿವೆ.
ಗಲಭೆಗೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಇದ್ದರೂ ಸಂಜೆ ವರೆಗೂ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿತ್ತು. ನಿಷೇಧಾಜ್ಞೆಯನ್ನು ಶುಕ್ರವಾರ ಸಂಜೆವರೆಗೆ ವಿಸ್ತರಿಸಲಾಗಿದೆ.
ತೊಕ್ಕೊಟ್ಟು, ಉಳ್ಳಾಲ ಸಂಪೂರ್ಣವಾಗಿ ಅಂಗಡಿಗಳು ಮುಚ್ಚಿದ್ದವು. ಆಂಗಡಿಗಳನ್ನು ತೆರೆಯಲು ಹೊರಟವರನ್ನು ಪೊಲೀಸರೇ ಭದ್ರತೆ ಹಿನ್ನೆಲೆಯಲ್ಲಿ ಮುಚ್ಚಿಸಿದ್ದಾರೆ ಎಂಬ ದೂರು ಕೇಳಿ ಬಂತು. ಉಳ್ಳಾಲ ಸೀ ರಸ್ತೆಯನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದರು. ನಿಷೇಧಾಜ್ಞೆ ನಡುವೆ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಪ್ರತ್ಯೇಕವಾಗಿ ಉಳ್ಳಾಲಕ್ಕೆ ಭೇಟಿ ನೀಡಿದರು.
ಸಚಿವರ ವಿರುದ್ಧ ಎರಡು ಸಮುದಾಯದವರು ಆಕ್ರೋಶ ಹೊರಗೆಡಹಿದರು. ಗುರುವಾರ ಸಂಜೆ ಸಚಿವ ಖಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನೀಷ್ ಎಂಬವರ ಆರೋಗ್ಯ ವಿಚಾರಿಸಿದರು. ಬಳಿಕ ಮೊಗವೀರಪಟ್ಣದಲ್ಲಿ ಹಾನಿಗೀಡದ ಲೋಲಾಕ್ಷ, ವಾರಿಜ ಹಾಗೂ ಮನೀಶ್ ಮನೆಗಳಿಗೆ ಭೇಟಿ ನೀಡಿದರು.
ಮನೆ ಭೇಟಿಗೆ ಬಂದ ಸಚಿವರನ್ನು ಮೊಗವೀರ ಸಮುದಾಯದ ಜನರು ಭೇಟಿ ಮಾಡಲು ಆಗಮಿಸತೊಡಗಿದರು. ಜನ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದ ಪೊಲೀಸರು ಸಚಿವರನ್ನು ಆದಷ್ಟು ಬೇಗನೆ ಕಳುಹಿಸಿಕೊಟ್ಟರು. ಸಚಿವರು ಸಿಗದೇ ಇದ್ದಾಗ ಕೆಲವರು ಧಿಕ್ಕಾರ ಕೂಗಿದರು.
ಅಮಾಯಕರಿಗೆ ಹಲ್ಲೆ: ಕೋಟೆಪುರದಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾದ ಮನೆಗೆ ಭೇಟಿ ನೀಡಿದರು. ಧರ್ಮಗ್ರಂಥ ಕೈಯಲ್ಲಿ ಹಿಡಿದ ಸಂತ್ರಸ್ತರು, 'ನಾವು ಯಾರಿಗೂ ಅನ್ಯಾಯ ಮಾಡಿಲ್ಲ, ಆದರೆ ನಮ್ಮ ಮನೆ ಮಂದಿಗೆ ಹಲ್ಲೆ ನಡೆಸಲಾಗಿದೆ' ಎಂದು ದೂರಿದರು. ಅಲ್ಲಿಂದ ಹಿಂದಿರುಗುತ್ತಿದ್ದಾಗ ಕೆಲವು ಮುಸ್ಲಿಂ ಯುವಕರು ಸಚಿವರನ್ನು ತಡೆದು ಘಟನೆ ನಡೆದ ಎರಡು ದಿನಗಳ ಬಳಿಕ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಉಳ್ಳಾಲ-ಸೀ ರಸ್ತೆ ಬಂದ್ ಮಾಡಿದ ಪರಿಣಾಮ ಜನ ಪರದಾಡುವಂತಾಗಿದೆ.
ಪೊಲೀಸರು ನಿರಪರಾಧಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು. ಇಲ್ಲೂ ಕೂಡಾ ಸಚಿವರನ್ನು ಆದಷ್ಟು ಬೇಗ ತೆರಳುವಂತೆ ಪೊಲೀಸರು ವಿನಂತಿಸಿದರು. ಕೋಡಿಯಲ್ಲಿಯೂ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಸಚಿವರು ಅಲ್ಲಿ ಭೇಟಿ ನೀಡದೆ ಮಂಗಳೂರಿಗೆ ಹಿಂದಿರುಗಿದರು.
ಘರ್ಷಣೆ ಹೀಗೆ ಆರಂಭವಾಯಿತು..
ಗಲಭೆ ಹೇಗೆ ಆರಂಭವಾಯಿತು ಎಂದು ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ವಿವರಿಸುವುದು ಹೀಗೆ: ಉಳ್ಳಾಲ ಮೊಗವೀರಪಟ್ಣ ಪ್ರದೇಶದಲ್ಲಿ ರಾತ್ರಿ ಮನೆಗಳ ಬಾಗಿಲು ತಟ್ಟುವುದು ಇತ್ಯಾದಿ ಕಿರುಕುಳ ನೀಡುತ್ತಿರುವ ಬಗ್ಗೆ ಆಕ್ರೋಶಗೊಂಡ ಮೀನುಗಾರರು ಒಟ್ಟಾಗಿ ಆರೋಪಿಗಳನ್ನು ಹಿಡಿಯಲು ರಾತ್ರಿ ಕಾವಲು ಕಾಯುತ್ತಿದ್ದರು. ಈ ಸಂದರ್ಭ ರಾತ್ರಿ ವೇಳೆ ಇಬ್ಬರು ಅಲ್ಲಿಗೆ ಬೈಕ್‌ನಲ್ಲಿ ಬಂದರು. ಮನೆ ಬಾಗಿಲು ತಟ್ಟುವವರು ಇವರೇ ಎಂದು ಮೀನುಗಾರರು ಇಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಇಬ್ಬರು ಜೋರಾಗಿ ಬೊಬ್ಬೆ ಹೊಡೆದು ಓಡಿದ್ದಾರೆ. ಆಗ ಇನ್ನೊಂದು ಕಡೆಯವರು ಬಂದು ಗಲಾಟೆ ಮಾಡಿದ್ದಾರೆ. ಒಬ್ಬ ಯುವಕನನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ತಿಳಿದುಕೊಂಡವರು ಮೀನುಗಾರ ಮಹಿಳೆಯರಿದ್ದ ಮನೆಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಆದರೆ ಯುವಕ ಮಾತ್ರ ಬೇರೆಡೆ ಬಚ್ಚಿಟ್ಟುಕೊಂಡಿದ್ದ. ಇವೆಲ್ಲ ಗುಂಪು ಘರ್ಷಣೆಗೆ ಕಾರಣವಾಯಿತು.