ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರು. 350 ಲಂಚ ಪ್ರಕರಣ: 22 ವರ್ಷ ಬಳಿಕ 3 ತಿಂಗಳ ಸಜೆ ಖಾಯಂ

Mainashree
Updated On : 7 Feb 2014, 9:57 am

ಪುತ್ತೂರು: ಸುಮಾರು 22 ವರ್ಷಗಳ ಹಿಂದೆ ಪುತ್ತೂರು ಪುರಸಭೆ ಕಚೇರಿಯಲ್ಲಿ ನಡೆದ ಲಂಚ ಪ್ರಕರಣದ ಅಪರಾಧಿ ವಿರುದ್ಧ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪನ್ನು ಇದೀಗ ಸುಪ್ರಿಂ ಕೋರ್ಟ್ ಎತ್ತಿ ಹಿಡಿದು ಜಿಲ್ಲಾ ನ್ಯಾಯಾಲಯ ವಿಧಿಸಿದ 3 ತಿಂಗಳ ಸಜೆಯನ್ನು ಖಾಯಂಗೊಳಿಸಿದೆ.
ಪುತ್ತೂರು ಪುರಸಭೆಯ ಮೀಟರ್ ರೀಡರ್ ತಿಮ್ಮಪ್ಪ ಪಾಟಾಳಿ ಅಪರಾಧಿ.
ಪ್ರಕರಣ ವಿವರ: 1992ರ ಜು.27ರಂದು ಕುಡಿಯುವ ನೀರಿನ ಸಂಪರ್ಕಕ್ಕಾಗಿ ಸಾಲ್ಮರ ಸಮೀಪದ ಹೆಬ್ಬಾರಬೈಲು ನಿವಾಸಿ ವೆಂಕಟ್ರಮಣ ಭಂಡಾರಿ ಎಂಬವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ವೆಂಕಟ್ರಮಣ ಭಂಡಾರಿ ತನ್ನ ಮನೆಗೆ ಕುಡಿಯುವ ನೀರಿನ ಅಕ್ರಮ ಸಂಪರ್ಕ ಪಡೆದಿದ್ದು ಇದನ್ನು ಗಮನಿಸಿದ ಪುರಸಭಾ ಅಧಿಕಾರಿಗಳು ಸಂಪರ್ಕ ಕಡಿತಗೊಳಿಸಿದ್ದರು.
 ಬಳಿಕ ಹೊಸ ಸಂಪರ್ಕಕ್ಕಾಗಿ ವೆಂಕಟ್ರಮಣ ಭಂಡಾರಿ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ಅಧಿಕಾರಿಗಳು ಹೊಸ ಕುಡಿಯುವ ನೀರು ಸಂಪರ್ಕಕ್ಕಾಗಿ ಮೀಟರ್ ರೀಡರ್ ತಿಮ್ಮಪ್ಪ ಪಾಟಾಳಿಗೆ ಸೂಚಿಸಿದ್ದರು. ಆದರೆ ಹೊಸ ಸಂಪರ್ಕ ನೀಡಬೇಕಾದಲ್ಲಿ ರು. 350 ನೀಡುವಂತೆ ತಿಮ್ಮಪ್ಪ ಪಾಟಾಳಿ ಅರ್ಜಿದಾರ ವೆಂಕಟ್ರಮಣ ಭಂಡಾರಿಯಲ್ಲಿ ಬೇಡಿಕೆಯಿಟ್ಟಿದ್ದರು.
ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ವೆಂಕಟ್ರಮಣ ಭಂಡಾರಿ ದೂರು ನೀಡಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ತಿಮ್ಮಪ್ಪ ಪಾಟಾಳಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಪುರಸಭಾ ಮುಖ್ಯಾಧಿಕಾರಿ ಗೋವಿಂದಯ್ಯ ಮತ್ತು ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಮೂವರನ್ನು ಇಲಾಖೆ ಅಮಾನತುಗೊಳಿಸಿತ್ತು. ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆಯಲ್ಲಿ  ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಖ್ಯಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಕರನ್ನು ಪ್ರಕರಣದಿಂದ ಕೈ ಬಿಡಲಾಗಿತ್ತು.
 ತಿಮ್ಮಪ್ಪ ಪಾಟಾಳಿ ವಿರುದ್ಧ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಶಿಕ್ಷೆ ಪ್ರಕಟ: ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆರೋಪಿ ತಿಮ್ಮಪ್ಪ ಪಾಟಾಳಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ತೀರ್ಪಿನ ವಿರುದ್ಧ ತಿಮ್ಮಪ್ಪ ಪಾಟಾಳಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ವಜಾ ಮಾಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಲೋಕಾಯುಕ್ತ ಸಂಸ್ಥೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು.
ಈ ನಡುವೆ, ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮುಖ್ಯಾಧಿಕಾರಿಯಾಗಿದ್ದ ಗೋವಿಂದಯ್ಯ ಮತ್ತು ದೂರುದಾರ ವೆಂಕಟ್ರಮಣ ಭಂಡಾರಿ ಮೃತಪಟ್ಟಿದ್ದರು. ಇದೀಗ ಸುಪ್ರಿಂ ಕೋರ್ಟ್ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದು ಅರೋಪಿ ತಿಮ್ಮಪ್ಪ ಪಾಟಾಳಿಯನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಸ್ತುತ ತಿಮ್ಮಪ್ಪ ಪಾಟಾಳಿ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಸುಳ್ಯದಲ್ಲಿ ಸರ್ಕಾರಿ ಕರ್ತವ್ಯದಲ್ಲಿದ್ದಾರೆ.
ಅಪರಾಧ ಸಾಬೀತುಗೊಂಡ ಹಿನ್ನಲೆಯಲ್ಲಿ ಪಾಟಾಳಿಯನ್ನು ಈಗಾಗಲೇ ಬಂಧಿಸಿ ಮಂಗಳೂರು ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement