ಉಳ್ಳಾಲದಲ್ಲಿ ಅಘೋಷಿತ ಕರ್ಫ್ಯೂ
ಮಂಗಳೂರು: ಉಳ್ಳಾಲದಲ್ಲಿ ಶುಕ್ರವಾರ ಅಘೋಷಿತ ಕರ್ಫ್ಯೂ ವಾತಾವರಣ. ರಾಜ್ಯದ ಇತರೆಡೆಯಿಂದ ಪೊಲೀಸ್ ತುಕಡಿಗಳನ್ನು, ಅಧಿಕಾರಿಗಳನ್ನು ಮಂಗಳೂರಿಗೆ ಕರೆಸಿದ್ದು, ಯಾರಿಗೂ ಮನೆಯಿಂದ ಹೊರಗೆ ಬರದಂತೆ ತಾಕೀತು ಮಾಡಿದ್ದಾರೆ.
ಗಲಭೆಯಲ್ಲಿ ಪಾಲ್ಗೊಂಡವರನ್ನು ಮತ್ತು ಮುಂಜಾಗ್ರತೆ ಕ್ರಮವಾಗಿ ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಉಳ್ಳಾಲದಿಂದ ಹೊರಗೆ ಹಬ್ಬದಂತೆ ಎಲ್ಲೆಡೆ ನಾಕಬಂಧಿ ಮಾಡಲಾಗಿದೆ.
ಶುಕ್ರವಾರ ದುಷ್ಕರ್ಮಿಗಳು ಬಸ್‌ಗೆ ಕಲ್ಲು ತೂರಿದ ಪರಿಣಾಮ ಮಗು ಗಾಯಗೊಂಡಿದೆ. ಭಜನೆ ಮಂದಿರಕ್ಕೆ ಕಲ್ಲು ತೂರಲಾಗಿದೆ. ಶುಕ್ರವಾರ ಜುಮಾ ನಮಾಜ್ ಪ್ರಾರ್ಥನೆಗೆ ಪೊಲೀಸರು ಬಿಗು ಭದ್ರತೆ ಒದಗಿಸಿದರು.
ಗುರುವಾರ ರಾತ್ರಿ ಶಾಂತಿ ಸಭೆ ಬಳಿಕ ಕೋಟೆಪುರದಲ್ಲಿ ಬೋಟ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯಿಂದ ಸಿಟ್ಟಿಗೆದ್ದ ಮೀನುಗಾರರು ಕೋಟೆಪುರದತ್ತ ಧಾವಿಸಿದ್ದು, ಎರಡು ಕಡೆಯಿಂದು ಕಲ್ಲು ತೂರಾಟ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು.
ಗಲಭೆ ತೀವ್ರ ರೂಪಕ್ಕೆ ತಿರುಗುವ ಸಾಧ್ಯತೆಯಿಂದ ಪೊಲೀಸರು ಎರಡು ಸಮುದಾಯದ ಮನೆಗಳಿಗೆ ನುಗ್ಗಿ ಗಂಡಸರನ್ನು ಬಂಧಿಸಿದ್ದಾರೆ. ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಉಳ್ಳಾಲದ ಆಯಕಟ್ಟಿನ ಜಾಗದಲ್ಲಿ ಠಿಕಾಣಿ ಹೂಡಿವೆ.
'ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರನ್ನು ಬಳ್ಳಾರಿ ಜೈಲ್‌ಗೆ ಕಳುಹಿಸಲಾಗುವುದು' ಎಂದು ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಹೇಳಿದ್ದಾರೆ. ಎಡಿಜಿಪಿ ಎಂ.ಎನ್.ರೆಡ್ಡಿ, ಐಜಿಪಿ ಪ್ರತಾಪ್ ರೆಡ್ಡಿ ಉಳ್ಳಾಲ ಗಲಭೆಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್‌ಗೆ ನ್ಯಾಯಿಕ ಅಧಿಕಾರ ನೀಡಲಾಗಿದೆ. ಗಲಭೆ ನಿಯಂತ್ರಿಸಲು ಬೇಕಾದ ಎಲ್ಲ ವಿಧಾನ ಬಳಸಿಕೊಳ್ಳಲಾಗುವುದು ಎಂದು ಎಡಿಜಿಪಿ ತಿಳಿಸಿದ್ದಾರೆ.
ಮಂಗಳೂರಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಅಧಿಕಾರಿಗಳನ್ನು ತಾತ್ಕಲಿಕ ಸೇವೆ ಪಡೆದುಕೊಳ್ಳಲಾಗುತ್ತಿದೆ. ಹಾಸನ ಎಸ್‌ಪಿ, ಧಾರವಾಡ ಎಸ್‌ಪಿ ಲೋಕೇಶ್ ಕುಮಾರ್ ಉಳ್ಳಾಲಕ್ಕೆ ಕರೆಸಿಕೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ತುಕಡಿಗಳು ಉಳ್ಳಾಲ, ಮಂಗಳೂರು, ಬಂಟ್ವಾಳದಲ್ಲಿ ಬೀಡು ಬಿಟ್ಟಿವೆ. ಬಾಹ್ಯ ಶಕ್ತಿಗಳು ಉಳ್ಳಾಲ ಪ್ರವೇಶಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ರಾಜಕಾರಣಿ, ಬಲ್ಕ್ ಎಸ್‌ಎಂಸ್‌ಗೆ ನಿಷೇಧ: ಉಳ್ಳಾಲಕ್ಕೆ ಬಂದು ಸ್ಥಳೀಯರ ಜತೆ ಮಾತನಾಡುವುದು, ಸಭೆ ಮಾಡಲು ಇನ್ನು ಮುಂದೆ ಬಿಡುವುದಿಲ್ಲ. ಇದು ಗಲಭೆ ಹಬ್ಬಲು ಕಾರಣವಾಗಬಹುದು ಎಂದು ಪೊಲೀಸ್ ಸ್ಪಷ್ಟ ಸಂದೇಶ ಜನಪ್ರತಿನಿಧಿಗಳಿಗೆ ಕಳುಹಿಸಿದ್ದಾರೆ.
ಬಲ್ಕ್ ಎಸ್‌ಎಂಎಸ್ ನಿಷೇಧಿಸುವಂತೆ ಪೊಲೀಸ್ ಮೊಬೈಲ್ ಕಂಪನಿಗಳಿಗೆ ಮನವಿ ಮಾಡಿದ್ದಾರೆ.
ಪೆಟ್ರೋಲ್ ಬಾಂಬ್, ತಲವಾರ್ ವಶ
ಮಂಗಳೂರು: ಉಳ್ಳಾಲ ಪರಿಸರದ ಮನೆಗಳಲ್ಲಿ ದುಷ್ಕರ್ಮಿಗಳು ಬಳಸಲು ಇಟ್ಟಿದ್ದ ಪೆಟ್ರೋಲ್ ಬಾಂಬ್, ತಳವಾರ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ 75 ಮಂದಿ ಬಂಧಿಸಲಾಗಿದೆ ಎಂದು ಕಮಿಷನರ್ ಆರ್. ಹಿತೇಂದ್ರ ಹೇಳಿದ್ದಾರೆ. ಉಳ್ಳಾಲದಲ್ಲಿ ಪತ್ರಕರ್ತರ ಜತೆ ಮಾತನಾಡಿ ಕಮಿಷನರ್ ಬಂಧಿತರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು.
ಬಿಗು ಭದ್ರತೆ: ಪರಿಸ್ಥಿತಿ ದುರುಪಯೋಗ ಪಡಿಸಿಕೊಳ್ಳಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಗಲಾಟೆ ಹಬ್ಬದಂತೆ ಮುಂಜಾಗರೂಕತೆ ಕ್ರಮ ಕೈಗೊಳ್ಳಲಾಗಿದೆ. ದ.ಕ, ಉಡುಪಿ, ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಮೀಸಲು ತುಕಡಿ ನಿಯೋಜಿಸಲಾಗಿದೆ ಎಂದು ಎಡಿಜಿಪಿ ಎಂ.ಎನ್.ರೆಡ್ಡಿ ಹೇಳಿದ್ದಾರೆ.
ಮೈಸೂರು, ಹಾಸನ, ಶಿವಮೊಗ್ಗ, ಕೊಡಗಿನಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ವದಂತಿಗಳಿಗೆ ಕಿವಕೊಡಬೇಡಿ. ವದಂತಿಗಳಿದ್ದರೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಹರಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ಬಸ್ ಬಂದ್: ತೊಕ್ಕೊಟ್ಟು ಬಳಿ ಪೊಲೀಸರು ನಾಕಾಬಂಧಿ ನಡೆಸಿದ್ದು, ಒಳಗೆ ದ್ವಿಚಕ್ರ ವಾಹನವನ್ನೂ ಬಿಡುತ್ತಿರಲ್ಲ. ಉಳ್ಳಾಲಕ್ಕೆ ಬಸ್ ಸಂಚಾರ ಬೆಳಗ್ಗಿನಿಂದಲೇ ಬಂದ್ ಆಗಿದೆ. ಉಳ್ಳಾಲ ಸಮೀಪದ ಕೆರೆಬೈಲ್ ಬಳಿ ಬಿ.ಸಿರೋಡ್‌ನತ್ತ ತೆರಳುತ್ತಿದ್ದ ಬಸ್‌ಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಬಸ್ ಒಳಗಿದ್ದ ಮಗುವಿಗೆ ಗಾಯವಾಗಿದೆ. ಮಗುವನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.