ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು
ಬಂಟ್ವಾಳ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ಬಿ.ಸಿ. ರೋಡ್ನಲ್ಲಿ ನಡೆದಿದೆ.
ಬಿ.ಸಿ. ರೋಡ್ನ ಬೈಪಾಸ್ರಸ್ತೆಯ ಸರ್ಕಾರಿ ನೌಕರರ ಕಾಲೋನಿ ನಿವಾಸಿ ನವೀನ್ ಕುಮಾರ್ ಎಂ. ಎಂಬವರ ಪತ್ನಿ ಚಂಚಲಾಕ್ಷಿ (29) ಮೃತಪಟ್ಟವರು.
ಚಂಚಲಾಕ್ಷಿ ಅವರಿಗೆ ವೈದ್ಯರು ಫೆ.4ರಂದು ಹೆರಿಗೆ ದಿನಾಂಕ ನೀಡಿದ್ದು, ಅದರಂತೆ ಮನೆಮಂದಿ ಅವರನ್ನು ಬಿ.ಸಿ. ರೋಡ್ನ ಖಾಸಗಿ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಿಸಿದ್ದರು. ಸಂಜೆ ಸುಮಾರು 6.40ರವರೆಗೂ ಆರೋಗ್ಯವಂತರಾಗಿದ್ದ ಚಂಚಲಾಕ್ಷಿ ಅವರಿಗೆ ಸಂಜೆವರೆಗೂ ಹೆರಿಗೆ ನೋವು ಕಾಣಿಸದ ಹಿನ್ನೆಲೆಯಲ್ಲಿ ನೋವು ಬರಿಸುವ ಚುಚ್ಚು ಮದ್ದು ನೀಡುವ ಸಲುವಾಗಿ ಹೆರಿಗೆ ಕೋಣೆಗೆ ಕರೆದೊಯ್ಯಲಾಗಿತ್ತು. ಚುಚ್ಚುಮದ್ದು ನೀಡಿದ ಬಳಿಕ ಅವರ ಆರೋಗ್ಯಸ್ಥಿತಿ ಏರುಪೇರಾಗಿದೆ. ಕೆಲಕ್ಷಣದಲ್ಲೇ ಅವರ ಮೈಬಣ್ಣ ಕಪ್ಪಾಗತೊಡಗಿದ್ದು, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಇನ್ನೂ ಜೀವಂತವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸೂಚಿಸಿದ್ದರು. ತಕ್ಷಣ ಚಂಚಲಾಕ್ಷಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮಗು ಹೊಟ್ಟೆಯಲ್ಲಿಯೇ ಅಸುನೀಗಿತ್ತು ಎಂದು ಪತಿ ನವೀನ್ ದೂರಿನಲ್ಲಿ ತಿಳಿಸಿದ್ದಾರೆ.
ನಗರ ಠಾಣೆಯಲ್ಲೂ ವಿಳಂಬ: ಸಾವಿಗೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯೇ ಕಾರಣ ಎಂದು ಮೃತಳ ಮನೆಯವರು ಆರೋಪಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲು ಮುಂದಾದಾಗ ಬಂಟ್ವಾಳ ನಗರ ಠಾಣೆ ಸಿಬ್ಬಂದಿ ದೂರು ಸ್ವೀಕರಿಸದೇ ನವೀನ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಈ ಮಧ್ಯೆ ಠಾಣೆಗೆ ಆಗಮಿಸಿದ ನಗರ ಠಾಣೆ ನೂತನ ಉಪನಿರೀಕ್ಷಕ ಸಂಜಯ್ ಕುಮಾರ್ ದೂರು ಸ್ವೀಕರಿಸಿದರು. ಮೆಸ್ಕಾಂನಲ್ಲಿ ಉದ್ಯೋಗದಲ್ಲಿದ್ದ ಚಂಚಲಾಕ್ಷಿ ಅವರಿಗೆ ಆರು ವರ್ಷದ ಗಂಡು ಮಗುವಿದ್ದು, ಎರಡನೇ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಶಕುಂತಳಾಗೆ ಸಿಗದ ನ್ಯಾಯ ಚಂಚಲಾಕ್ಷಿ ಗೆ ಸಿಕ್ಕೀತೇ...?
ನಿಜಕ್ಕೂ ಇದೊಂದು ಆಘಾತಕಾರಿ ಸನ್ನಿವೇಶ. ಮನೆಗೆ ಮತ್ತೊಂದು ಮಗು ಬರುತ್ತದೆ ಎಂಬ ಸಂಭ್ರಮದಲ್ಲಿದ್ದ ಕುಟುಂಬದಲ್ಲೀಗ ಸ್ಮಶಾನ ಮೌನ. ಇತ್ತೀಚೆಗೆ ಬಂಟ್ವಾಳದಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ಹೋದಾಗ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕೆಲ ತಿಂಗಳ ಹಿಂದೆಯಷ್ಟೇ ಸರಪಾಡಿಯ ಶಕುಂತಳಾ ಎಂಬವರು ಬಂಟ್ವಾಳದ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಹಲವು ಸಂಘಟನೆಗಳು ಸೇರಿ ವೈದ್ಯರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆಯೇ, ವೈದ್ಯರ ಸಂಘಟನೆಯೂ ಈ ಪ್ರತಿಭಟನೆಯನ್ನು ಖಂಡಿಸಿ ಒಂದು ದಿನ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಯನ್ನೂ ನಡೆಸಿತ್ತು. ಬಳಿಕ ಶಕುಂತಳಾ ದೇಹದ ವೈದ್ಯಕೀಯ ಪರೀಕ್ಷಾ ವರದಿ ಆಧರಿಸಿ ತನಿಖೆ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದರು. ಆದರೆ ತಿಂಗಳೆಷ್ಟೋ ಕಳೆಯಿತು. ಶಕುಂತಳಾ ಸಾವಿನ ರಹಸ್ಯ ಬಯಲಾಗಲೇ ಇಲ್ಲ. ಪ್ರತಿಭಟನೆ ನಡೆಸಿದ್ದ ಸಂಘಟನೆಗಳೂ ಮೌನವಾಗಿವೆ. ಈಗ ಶಕುಂತಳಾ ಮೃತಪಟ್ಟ ರೀತಿಯಲ್ಲಿಯೇ ಚಂಚಲಾಕ್ಷಿ ಮೃತಪಟ್ಟಿದ್ದಾರೆ. ಶಕುಂತಳಾಗೆ ಸಿಗದ ನ್ಯಾಯ ಚಂಚಲಾಕ್ಷಿಗೆ ಸಿಗಬಹುದೇ..