'ಉತ್ತಮ ಶಿಕ್ಷಕರಾಗುವುದು ಹೇಗೆ' ಕೃತಿ ಬಿಡುಗಡೆ
ಪುತ್ತೂರು: ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರನ್ನು ಒಂದು ಗೂಡಿಸಿ, ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪರಿಚಯಗಳನ್ನಾಧರಿತ ಉತ್ತಮ ಶಿಕ್ಷಕರಾಗುವುದು ಹೇಗೆ ಎನ್ನುವ ಕೃತಿ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶಿಕ್ಷಣ ಇಲಾಖೆ ಮಾದರಿ ಕಾರ್ಯಕ್ರಮ ನಡೆಸಿದೆ ಎಂದು ತಾಪಂ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ ಹೇಳಿದರು.
ಅವರು ಪುತ್ತೂರು ಮಾದೆ ದೇವುಸ್ ಚರ್ಚ್ನ ಸಭಾಂಗಣದಲ್ಲಿ ನಡೆದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲೆ ಮುಖ್ಯ ಶಿಕ್ಷಕ ನಾರಾಯಣ ಭಟ್ ರಚಿತ 'ಉತ್ತಮ ಶಿಕ್ಷಕರಾಗುವುದು ಹೇಗೆ? ನೀವೂ ಹೀಗೆ ಮಾಡಿ' ಕೃತಿ ಲೋಕಾರ್ಪಣೆ, ವಿಷನ್ ಪುತ್ತೂರು ಲಾಂಛನ ಬಿಡುಗಡೆ ಹಾಗೂ ಪ್ರಶಸ್ತಿ ಪುಸ್ಕೃತರೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದ.ಕ ಜಿಲ್ಲೆಯು ಶಿಕ್ಷಣದಲ್ಲಿ ಮುಂದುವರಿದಿದ್ದು ಇಲ್ಲಿನ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವುದರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಿದ್ಯಾರ್ಥಿಗಳನ್ನು ಜಿಲ್ಲೆಯು ಆಕಷಿಸುತ್ತಿದೆ ಎಂದರು. ಶಿಕ್ಷಕ ನಾರಾಯಣ ಭಟ್ ರಚಿಸಿದ ಕೃತಿ ಯುವ ಶಿಕ್ಷಕರಿಗೆ ಮಾದರಿಯಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ವಾಣಿ ಶ್ರೀಧರ್ ಕೃತಿ ಲೋಕಾರ್ಪಣೆ ಮಾಡಿದರು. ದ.ಕ. ಜಿಲ್ಲೆ ವಿದ್ಯಾಂಗ ಉಪ ನಿರ್ದೇಶಕ ಜಯಶೇಖರ ಮೋಸೆಸ್, ಪ್ರಭಾರ ಸಮನ್ವಯಾಧಿಕಾರಿ ಹರಿಕಿರಣ್ ಕೈಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿನ್ನಪ್ಪ ಗೌಡ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಮಚ್ಚನ್, ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಅಬ್ರಹಾಂ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ತಾಲೂಕು ಅಧ್ಯಕ್ಷೆ ನಯನಾ ವಿ.ರೈ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಸ್ವಾಗತಿಸಿದರು. ಸತೀಶ್ ಭಟ್ ನಿರೂಪಿಸಿದರು. ಬಿಆರ್ಸಿ ರಮೇಶ್ ಉಳಯ ವಂದಿಸಿದರು.