ಉಳ್ಳಾಲ ಶಾಂತ, ಸಂಸದ ಭೇಟಿಗೆ ತಡೆ
ಮಂಗಳೂರು: ಕೋಮು ಸಾಮರಸ್ಯದಿಂದ ಹದಗೆಟ್ಟಿದ್ದ ಉಳ್ಳಾಲದಲ್ಲಿ ಭಾನುವಾರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಇದೇ ವೇಳೆ, ಗಲಭೆ ಪೀಡಿತ ಪ್ರದೇಶ ಭೇಟಿಗೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ಗೆ ಪೊಲೀಸರು ತಡೆ ಒಡ್ಡಿದ ಘಟನೆ ನಡೆದಿದೆ.
ಕಳೆದ ಮೂರು ದಿನಗಳಿಂದ ಉದ್ವಿಗ್ನ ಸ್ಥಿತಿಯಲ್ಲಿದ್ದ ಉಳ್ಳಾದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಭಾನುವಾರ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಆದರೆ ರಾತ್ರಿಯ ಪರಿಸ್ಥಿತಿ ನೋಡಿಕೊಂಡು ಸೋಮವಾರ ಬೆಳಗ್ಗೆ 8 ಗಂಟೆ ಬಳಿಕ ನಿಷೇಧಾಜ್ಞೆ ಹಿದಕ್ಕೆ ಪಡೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ಸಂಸದರಿಗೂ ತಡೆ: ಗಲಭೆ ಪೀಡಿತ ಉಳ್ಳಾಲ ಪ್ರದೇಶಕ್ಕೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರ ಭೇಟಿಗೆ ಪೊಲೀಸರು ತಡೆ ಹಾಕಿದ್ದಾರೆ. ಇದು ಭಾನುವಾರವೂ ಮುಂದುವರಿದಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿಗೆ ಪೊಲೀಸರು ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ.
ಮಧ್ಯಾಹ್ನ ತೊಕ್ಕೊಟ್ಟು ಬಳಿ ಸಂಸದ ನಳಿನ್ ಕುಮಾರ್ ಆಗಮಿಸಿದಾಗ ಎಸಿಪಿ ಜಗದೀಶ್ ತಡೆದು, ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಸನ್ನಿವೇಶದಲ್ಲಿ ಭೇಟಿ ನೀಡುವುದು ಸರಿಯಲ್ಲ ಎಂದು ಮನ ಒಲಿಸಲು ಮುಂದಾದರು.
ಆದರೆ ಘಟನೆ ನಡೆದ ಮರುದಿನ ಸಚಿವ ಖಾದರ್ ಉಳ್ಳಾಲಕ್ಕೆ ಬಂದಾಗ, ಅವರನ್ನು ಪೊಲೀಸರೇ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ತಾನು ಸಂಸದನಾಗಿರುವ ಕಾರಣ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅರಿಯುವುದು ತನ್ನ ಕರ್ತವ್ಯ. ಅದು ಸಾಧ್ಯವಿಲ್ಲ ಎಂದಾದರೆ ದೇವಸ್ಥಾನಕ್ಕೆ ಭೇಟಿ ನೀಡಿ ಠಾಣೆಯಲ್ಲಿ ಘಟನೆ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು. ಇದಕ್ಕೂ ಅವಕಾಶ ನೀಡದೆ ಎಸಿಪಿ ಬಂಧಿಸುವ ಬೆದರಿಕೆ ಹಾಕಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಸಂಸತ್ನಲ್ಲಿ ಪ್ರಸ್ತಾಪ: ಜನಪ್ರತಿನಿಧಿಯಾಗಿ ತನಗೆ ಉಳ್ಳಾಲ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡದ ಪೊಲೀಸರ ಕ್ರಮವನ್ನು ಸಂಸತ್ನಲ್ಲಿ ಪ್ರಸ್ತಾಪಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಗಲಭೆಯಲ್ಲಿ ನೊಂದ ಸಂತ್ರಸ್ತರನ್ನು ಮಾತನಾಡಿಸಿ ಅವರಿಗೆ ಧೈರ್ಯದ ಮಾತನ್ನಾಡಲು ನಿರ್ಧರಿಸಿದ್ದೆ. ಆದರೆ ಪೊಲೀಸರು ಸೆಕ್ಷನ್ ಹೆಸರಿನಲ್ಲಿ ನೊಂದವರಿಗೆ ಸಾಂತ್ವನ ಹೇಳಲು ಅವಕಾಶ ನೀಡದಿರುವುದು ಖಂಡನೀಯ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಷ್ಪಕ್ಷಪಾತ ತನಿಖೆಗೆ ಅಡ್ಡಿ: ಬಳಿಕ ಕೊಲ್ಯ ಶಾರದಾ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಕಾಂಗ್ರೆಸ್ನ ಬೇಜವಾಬ್ದಾರಿ ನಡವಳಿಕೆ ಕಾರಣ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಲಭೆ ನಡೆದರೂ ಗೃಹ ಸಚಿವರು, ಉಸ್ತುವಾರಿ ಸಚಿವರು, ಆರೋಗ್ಯ ಸಚಿವರಾಗಲೀ ಪೊಲೀಸ್ ಇಲಾಖೆ ಜತೆ ಚರ್ಚಿಸಿ ಶಾಂತಿ ಸಮಿತಿ ಸಭೆ ನಡೆಸಿಲ್ಲ. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ಗೆ ಗಲಭೆ ನಿಯಂತ್ರಿಸುವ ಇಚ್ಛೆ ಇಲ್ಲ. ನಿರಪರಾಧಿಗಳನ್ನು ಬಂಧಿಸಿ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್ ಜತೆ ನಗರ ಪೊಲೀಸ್ ಕಮಿಷನರ್ರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಹತೋಟಿಗೆ ಬಂದ ಪರಿಸ್ಥಿತಿ ಮತ್ತೆ ಹದಗೆಡಬಾರದು ಎಂಬ ನೆಲೆಯಲ್ಲಿ ಅವಕಾಶ ನೀಡಿಲ್ಲ ಎಂದು ಕಮಿಷನರ್ ಮನದಟ್ಟು ಮಾಡಿದರು ಎನ್ನಲಾಗಿದೆ.
ಉಳ್ಳಾಲ ಸೂಕ್ಷ್ಮ ಪ್ರದೇಶ ಘೋಷಿಸಿ: ಸಿಎಂಗೆ ಪತ್ರ
ಉಳ್ಳಾಲದಲ್ಲಿ ಪ್ರಕ್ಷುಬ್ದ ವಾತಾವರಣ ಹಿನ್ನೆಲೆಯಲ್ಲಿ ಗಲಭೆ ಸಂತ್ರಸ್ತರ ಬವಣೆಗೆ ಸರ್ಕಾರ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು, ಸ್ಥಳೀಯರಲ್ಲಿ ವಿಶ್ವಾಸ ಮೂಡಿಸಲು ಮುಂದಾಗುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರ ಬರೆದಿದ್ದಾರೆ. ಮನೆಗಳಿಗೆ ಮತ್ತು ವಾಹನಗಳಿಗೆ ಕಲ್ಲು ತೂರಾಟ ಹಾಗೂ ದಾಳಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು. ಮೀನುಗಾರಿಕಾ ಬೋಟ್ಗಳಿಗೆ ನಡೆದಿರುವ ಹಾನಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು. ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಬೇಕು. ಹೊರ ರೋಗಿಯಾಗಿ ಚಿಕಿತ್ಸೆ ಪಡೆದವರಿಗೆ ತಕ್ಷಣ ಪರಿಹಾರ ನೀಡಬೇಕು. ಉಳ್ಳಾಲ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕು, ವಿಶೇಷವಾಗಿ ಈ ಪ್ರದೇಶದಲ್ಲಿ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ದಿನದ 24 ಗಂಟೆ ಪೊಲೀಸ್ ಪಹರೆ ನಡೆಸಬೇಕು, ಕ್ರಿಮಿನಲ್ ಹಿನ್ನೆಲೆಯುಳ್ಳ ಮತಾಂಧ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಉಳ್ಳಾಲದಲ್ಲಿ ಜನಸಾಮಾನ್ಯರು ಎಲ್ಲ ಪ್ರದೇಶಕ್ಕೆ ಭಯ ಮುಕ್ತರಾಗಿ ಓಡಾಡುವ ವಾತಾವರಣ ಪುನರ್ ನಿರ್ಮಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.