ಎಂಆರ್ಪಿಎಲ್ ತ್ರೈಮಾಸಿಕ ಆದಾಯ 248 ಕೋಟಿಗೆ ಕುಸಿತ
ಮಂಗಳೂರು: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಕಂಪನಿ (ಎಂಆರ್ಪಿಎಲ್) ನಷ್ಟದ ಹಾದಿಯಲ್ಲಿದೆ.
ಶನಿವಾರ ಎಂಆರ್ಪಿಎಲ್ನಲ್ಲಿ ಒಎನ್ಜಿಸಿ ಅಧ್ಯಕ್ಷ ಸುಧೀರ್ ವಾಸುದೇವ ಅಧ್ಯಕ್ಷತೆಯಲ್ಲಿ ನಡೆದ 185ನೇ ಬೋರ್ಡ್ ಮೀಟಿಂಗ್ನಲ್ಲಿ ಕಂಪನಿ ಆದಾಯ ಕುಂಠಿತಗೊಂಡಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಎಂಆರ್ಪಿಎಲ್ ಮೂರನೇ ಹಂತದ ಯೋಜನೆ ತ್ವರಿತವಾಗಿ ಕಾರ್ಯಾರಂಭಗೊಂಡರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.
ರು. 248 ಕೋಟಿ ಇಳಿಕೆ: ಕಳೆದ ತ್ರೈಮಾಸಿಕ ಅವಧಿಯಲ್ಲಿ ಎಂಆರ್ಪಿಎಲ್ ನಿವ್ವಳ ಆದಾಯ ರು. 248 ಕೋಟಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರು. 360 ಕೋಟಿ ಲಾಭ ಗಳಿಸಿತ್ತು. ಭೌತಿಕ ನಿರ್ವಹಣೆ 3.75 ಮಿಲಿಯನ್ ಮೆಟ್ರಿಕ್ ಟನ್ಗೆ ಕುಸಿದಿದೆ. ಕಳೆದ ವರ್ಷ ಇದು 3.81 ಮೆ.ಮಿ.ಟನ್ ಆಗಿತ್ತು. ಬಿಎಚ್ಇಎಲ್ ಕಾರ್ಯಾರಂಭದ ತಾಂತ್ರಿಕ ತೊಂದರೆ, ನಿರಂತರ ವಿದ್ಯುತ್ ಕೊರತೆ, ಮಾರುಕಟ್ಟೆ ಲಾಭ ಗಳಿಕೆಯಲ್ಲಿ ಕಡಿತ ಇತ್ಯಾದಿ ಕಾರಣದಿಂದ ಆದಾಯದಲ್ಲಿ ಕುಸಿತ ಕಂಡಿದೆ. ಮೂರನೇ ಹಂತದ ವಿಸ್ತರಣಾ ಯೋಜನೆಯ ಕಾಮಗಾರಿ ಜನವರಿ ಮಧ್ಯಭಾಗದಲ್ಲಿ ಶೇ.99.50 ಮುಕ್ತಾಯವಾಗಿದೆ. ಇದು ಪೂರ್ತಿ ಕಾರ್ಯಾರಂಭಗೊಂಡರೆ ಎಂಆರ್ಪಿಎಲ್ ಮತ್ತೆ ಆದಾಯದತ್ತ ದಾಪುಗಾಲು ಇಡಲು ಸಾಧ್ಯ. 2012-13ರಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಕೇಂದ್ರ ಸಾರ್ವಜನಿಕ ಉದ್ದಿಮೆ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಅದೇ ರೀತಿ ಮುಂದೆಯೂ ಸಾಧನೆಗೆ ಶ್ರಮಿಸಬೇಕು ಎಂದು ಸುಧೀರ್ ವಾಸುದೇವ ಹೇಳಿದ್ದಾರೆ.